ಬೆಂಗಳೂರು: ದೇಶದ ಕಾಫಿ ರುಚಿಯ ಸ್ವಾದವನ್ನು ಸಿಂಗಪುರದ ಜನರಿಗೆ ಪರಿಚಯಿಸಲು ಉದ್ದೇಶಿಸಿದ್ದೇವೆ. ಆರಂಭಿಕವಾಗಿ ಬೆಂಗಳೂರಿನಲ್ಲಿ ಮೊದಲ ಮಳಿಗೆಯನ್ನು ಹಲಸೂರು ಕೆರೆ ಬಳಿ ಪ್ರಾರಂಭಿಸಿದ್ದೇವೆ ಎಂದು 6oz (ಔನ್ಸ್) ಕಾಫಿ ಮತ್ತು ಕೆಫೆಯ ಸಂಸ್ಥಾಪಕ ಸ್ಯಾಮ್ ರಾಬರ್ಟ್ಸ್ ಮಂಗಳವಾರ ಹೇಳಿದ್ದಾರೆ.
ಅಕ್ಟೋಬರ್ 1ರ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಅಂಗವಾಗಿ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ಚಿಕ್ಕಮಗಳೂರು, ಕೊಡಗು ಸುತ್ತಮುತ್ತಲಿನಲ್ಲಿ ಪ್ರಸ್ತುತ ಕಾಫಿ ಬೀಜಗಳನ್ನು ಖರೀದಿಸಲಾಗುತ್ತಿದೆ. ಉತ್ತಮ ರುಚಿಯ ಕಾಫಿಗಾಗಿ ಗುಣಮಟ್ಟದ ಬೀಜಗಳನ್ನು ಆಯ್ಕೆ ಮಾಡಿ, ರೈತರಿಂದಲೇ ನೇರವಾಗಿ ಖರೀದಿಸಲಾಗುತ್ತಿದೆ ಎಂದರು.
ವಿಶೇಷವಾದ ಕಾಫಿ ಯಂತ್ರವನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿದೆ. ಈಗಾಗಲೇ, 400 ಕೆ.ಜಿ ಕಾಫಿ ಬೀಜ ಖರೀದಿಸಲಾಗಿದ್ದು, ಚಿಕ್ಕಮಗಳೂರು ಚಾರ್ಮ್, ಕರ್ನಾಟಕ ವೆಲ್ವೆಟ್ ಮತ್ತು ಕೂರ್ಗ್ ಕ್ರೌನ್ ಹೆಸರಿನಲ್ಲಿನ ಕಾಫಿಯನ್ನು ಗ್ರಾಹಕರಿಗೆ ನೀಡುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮತ್ತಷ್ಟು ಮಳಿಗೆ ತೆರೆಯುವ ಉದ್ದೇಶ ಹೊಂದಿದ್ದು, ಅದರ ಯಶಸ್ವಿ ಆಧಾರದ ಮೇಲೆ ಸಿಂಗಪುರದಲ್ಲೂ ಮಳಿಗೆ ಆರಂಭಿಸಲಾಗುವುದು. ಕೂರ್ಗ್ ಹೆಸರಲ್ಲಿ ದೇಶದ ಕಾಫಿ ಬೀಜಗಳನ್ನು ರಫ್ತು ಮಾಡಲಾಗುವುದು. ಮಳಿಗೆಯಲ್ಲಿ ಕಾಫಿ ಆರಂಭಿಕ ಬೆಲೆ ₹130 ಇದೆ. ಬೆಳಿಗ್ಗೆ 6 ರಿಂದ ರಾತ್ರಿ 12ರ ವರೆಗೆ ಮಳಿಗೆ ತೆರೆದಿರಲಿದೆ ಎಂದು ಹೇಳಿದರು.
ಬೆಂಗಳೂರಿನ ಮತ್ತಿಕೆರೆಯ ನಿವಾಸಿಯಾದ ಸ್ಯಾಮ್ ರಾಬರ್ಟ್ಸ್ ಕಳೆದ 30 ವರ್ಷದಿಂದ ಸಿಂಗಪುರದಲ್ಲಿ ಮನೋವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗೆ https://6oz.coffee/menu ಭೇಟಿ ನೀಡಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.