ನವದೆಹಲಿ: 2024–25ನೇ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ₹94,151 ಕೋಟಿ ಬಂಡವಾಳ ಹೂಡಿಕೆಯಾಗಿದೆ.
ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ₹18,358 ಕೋಟಿ ಹೂಡಿಕೆಯಾಗಿತ್ತು. ಇದಕ್ಕೆ ಹೋಲಿಸಿದರೆ ಹೂಡಿಕೆ ಪ್ರಮಾಣದಲ್ಲಿ ಐದು ಪಟ್ಟು ಏರಿಕೆಯಾಗಿದೆ.
ಸರ್ಕಾರದ ಉತ್ತಮ ನೀತಿಗಳಿಂದಾಗಿ ದೇಶದ ಆರ್ಥಿಕ ಸ್ಥಿತಿ ಸದೃಢವಾಗಿದೆ. ಇದರಿಂದ ಹೂಡಿಕೆದಾರರಲ್ಲಿ ವಿಶ್ವಾಸ ವೃದ್ಧಿಸಿದೆ. ಷೇರುಗಳ ಹೂಡಿಕೆಯಲ್ಲಿ ಗಳಿಕೆ ಹೆಚ್ಚಿದೆ. ಹಾಗಾಗಿ, ಬಂಡವಾಳದ ಒಳಹರಿವಿನಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಅಲ್ಲದೆ, ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯಾಗಿರುವ ಸಂಪತ್ತಿನ ನಿರ್ವಹಣಾ ಮೌಲ್ಯವು (ಎಯುಎಂ) ₹27.68 ಲಕ್ಷ ಕೋಟಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ನಿರ್ವಹಣಾ ಮೌಲ್ಯವು ₹17.43 ಲಕ್ಷ ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಶೇ 59ರಷ್ಟು ಹೆಚ್ಚಳವಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ತಿಳಿಸಿದೆ.
ಈ ಅವಧಿಯಲ್ಲಿ ಹೊಸದಾಗಿ 3 ಕೋಟಿ ಹೂಡಿಕೆದಾರರು ಸೇರ್ಪಡೆಯಾಗಿದ್ದಾರೆ. ಒಟ್ಟು ಹೂಡಿಕೆದಾರರ ಸಂಖ್ಯೆ 13.3 ಕೋಟಿ ದಾಟಿದೆ.
‘ಜನರ ಹಣಕಾಸಿನ ಸಾಕ್ಷರತೆ ಸುಧಾರಿಸಿದೆ. ಹೂಡಿಕೆಯ ವೇದಿಕೆಗಳು ಹೂಡಿಕೆದಾರರಿಗೆ ಕೈಗಟುತ್ತಿವೆ. ಹಾಗಾಗಿ, ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಸ್ಟಾಕ್ ಟ್ರೇಡಿಂಗ್ ವೇದಿಕೆಯಾದ ಟ್ರೇಡೆಜಿನಿ ಸಿಒಒ ತ್ರಿವೇಶ್ ಡಿ. ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.