ADVERTISEMENT

ರಾಜ್ಯದಲ್ಲಿ 13,896 ಉದ್ಯೋಗ ಸೃಷ್ಟಿ: ಸಚಿವ ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 10:52 IST
Last Updated 22 ಜೂನ್ 2024, 10:52 IST
ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ   

ಬೆಂಗಳೂರು: ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ 146ನೇ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯು ಒಟ್ಟು ₹3,587 ಕೋಟಿ ಬಂಡವಾಳ ಹೂಡಿಕೆಯ 64 ಯೋಜನೆಗಳಿಗೆ ಅನುಮೋದನೆ ನೀಡಿದೆ.

ಈ ಅನುಮೋದನೆಯಿಂದ ರಾಜ್ಯದಲ್ಲಿ 13,896 ಮಂದಿಗೆ ಉದ್ಯೋಗ ದೊರೆಯಲಿದೆ. 

ಇಂಟರ್‌ನ್ಯಾಷನಲ್‌ ಬ್ಯಾಟರಿ ಕಂಪನಿ ಇಂಡಿಯಾ, ರಿವರ್‌ ಮೊಬಿಲಿಟಿ, ವೆಗಾ ಆಟೊ ಆ್ಯಕ್ಸೆಸರೀಸ್‌, ಮಿರ್ರಾ ಆ್ಯಂಡ್‌ ಮಿರ್ರಾ ಇಂಡಸ್ಟ್ರೀಸ್‌ ಸೇರಿ ಹಲವು ಕಂಪನಿಗಳು ಬಂಡವಾಳ ಹೂಡಲಿವೆ.

ADVERTISEMENT

ಈ ಯೋಜನೆಗಳಲ್ಲಿ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕ, ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ, ವಿದ್ಯುತ್‌ ಉತ್ಪಾದನಾ ಕೇಂದ್ರ ಹಾಗೂ ಹಾಲು ಉತ್ಪಾದನಾ ಘಟಕಗಳು ಸೇರಿವೆ.

ಸಭೆಯಲ್ಲಿ ಕೈಗೊಂಡ ನಿರ್ಧಾರಗಳಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ತುಮಕೂರು, ಯಾದಗಿರಿ, ಹಾವೇರಿ, ಗದಗ ಹಾಗೂ ಮೈಸೂರು ಜಿಲ್ಲೆಯಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ. 

ಸಭೆಯ ಬಳಿಕ ಮಾತನಾಡಿದ ಸಚಿವ ಪಾಟೀಲ, ‘ಇಂಟರ್‌ನ್ಯಾಷನಲ್‌ ಬ್ಯಾಟರಿ ಕಂಪನಿ ಇಂಡಿಯಾವು ದೇವನಹಳ್ಳಿ ಬಳಿ ₹390 ಕೋಟಿ ವೆಚ್ಚದಲ್ಲಿ ಪ್ರೈಮರಿ ಸೆಲ್ಸ್‌ ಆ್ಯಂಡ್‌ ಬ್ಯಾಟರೀಸ್‌ ಘಟಕ ಸ್ಥಾಪಿಸಲಿದೆ. ಇದರಿಂದ 300 ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ’ ಎಂದು ವಿವರಿಸಿದರು.

‘ಬೆಂಗಳೂರು ಮೂಲದ ನವೋದ್ಯಮವಾದ ರಿವರ್‌ ಮೊಬಿಲಿಟಿ ಪ್ರೈವೆಟ್‌ ಲಿಮಿಟೆಡ್‌ ಹೊಸಕೋಟೆ ಬಳಿ ₹306.9 ಕೋಟಿ ವೆಚ್ಚದಲ್ಲಿ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕ ಸ್ಥಾಪಿಸಲಿದೆ. ಇದರಿಂದ 690 ಜನರಿಗೆ ಉದ್ಯೋಗ ಸಿಗಲಿದೆ’ ಎಂದರು.

ವೆಗಾ ಆಟೊ ಆ್ಯಕ್ಸೆಸರೀಸ್‌ ಪ್ರೈವೇಟ್‌ ಲಿಮಿಟೆಡ್‌ನಿಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನಲ್ಲಿ ಇಪಿಎಸ್‌ ಲೀನರ್‌ ತಯಾರಿಕಾ ಘಟಕ ಸ್ಥಾಪನೆಯಾಗಲಿದೆ. ಇದಕ್ಕಾಗಿ ₹205 ಕೋಟಿ ವೆಚ್ಚ ಮಾಡಲಿದೆ ಎಂದು ತಿಳಿಸಿದರು.

ತುಮಕೂರು ಜಿಲ್ಲೆಯ ವಸಂತನರಸಾಪುರದಲ್ಲಿ ಮಿರ್ರಾ ಆ್ಯಂಡ್‌ ಮಿರ್ರಾ ಇಂಡಸ್ಟ್ರೀಸ್‌ನಿಂದ ಉಕ್ಕಿನ ತಂತಿ ಸಂಸ್ಕರಣಾ ಘಟಕ ಸ್ಥಾಪಿಸಲಾಗುತ್ತಿದೆ. ಇದಕ್ಕೆ ಕಂಪನಿಯು ₹200 ಕೋಟಿ ಹೂಡಿಕೆ ಮಾಡಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.