ನವದೆಹಲಿ: ಡೆಟ್ ಮ್ಯೂಚುವಲ್ ಫಂಡ್ ಯೋಜನೆಗಳಿಂದ ಆಗಸ್ಟ್ ತಿಂಗಳಿನಲ್ಲಿ ₹25,872 ಕೋಟಿ ಬಂಡವಾಳ ಹೊರಹರಿವು ಆಗಿದೆ. ಜುಲೈನಲ್ಲಿ ₹61,440 ಕೋಟಿ ಬಂಡವಾಳ ಹೂಡಿಕೆ ಆಗಿತ್ತು.
ಡೆಟ್ ಫಂಡ್‌ನ 16 ಫಂಡ್‌ಗಳ ಪೈಕಿ 9 ಫಂಡ್‌ಗಳಿಂದ ಬಂಡವಾಳ ಹಿಂತೆಗೆತ ಕಂಡುಬಂದಿದೆ ಎಂದು ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟವು (ಎಎಂಎಫ್‌ಐ) ಮಾಹಿತಿ ನೀಡಿದೆ.
ಡೆಟ್ ಫಂಡ್‌ನಲ್ಲಿ ಲಿಕ್ವಿಡ್, ಅಲ್ಟ್ರಾ ಶಾರ್ಟ್ ಮತ್ತು ಲೋ ಡ್ಯುರೇಷನ್ ಫಂಡ್‌ಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೊರಹರಿವು ಆಗಿದೆ. ಬ್ಯಾಂಕಿಂಗ್ ಮತ್ತು ಸರ್ಕಾರಿ ಸ್ವಾಮ್ಯದ ವಲಯಗಳಿಂದಲೂ ಹೊರಹರಿವು ಆಗಿದೆ ಎಂದು ತಿಳಿಸಿದೆ.
ಸದ್ಯ ಇರುವ ಬಡ್ಡಿದರದ ಪ್ರಮಾಣ ಮತ್ತು ದೇಶದಲ್ಲಿ ಬಡ್ಡಿದರ ಪ್ರಮಾಣವು ಇಳಿಕೆ ಕಾಣಲಿದೆಯೇ ಅಥವಾ ಏರಿಕೆ ಆಗುವುದೇ ಎನ್ನುವ ಕುರಿತು ಸ್ಪಷ್ಟತೆ ಸಿಗದೇ ಇರುವುದರಿಂದಾಗಿ ಹೂಡಿಕೆದಾರರು ಎಚ್ಚರಿಕೆಯ ನಡೆಯನ್ನು ಮುಂದುವರಿಸುವ ಸಾಧ್ಯತೆ ಇದೆ. ಷೇರುಪೇಟೆಯಲ್ಲಿ ಗೂಳಿ ಓಟ ಜೋರಾಗಿರುವುದರಿಂದಲೂ ಹೂಡಿಕೆದಾರರು ಡೆಟ್ ಫಂಡ್‌ಗಳಿಗೆ ಬದಲಾಗಿ ಈಕ್ವಿಟಿಗಳತ್ತ ತಮ್ಮ ಗಮನ ಹರಿಸಿರುವಂತೆ ಕಾಣುತ್ತಿದೆ ಎಂದು ಮಾರ್ನಿಂಗ್‌ಸ್ಟಾರ್ ಇಂಡಿಯಾದ ವಿಶ್ಲೇಷಕ ಮೆಲ್ವಿನ್ ಸ್ಯಾಂಟರಿಟಾ ಹೇಳಿದ್ದಾರೆ.
ಕೆಲವು ಹೂಡಿಕೆದಾರರು ಬಡ್ಡಿದರ ಏರಿಕೆ ಪ್ರವೃತ್ತಿಯು ಬದಲಾಗುವ ಆಗುವ ನಿರೀಕ್ಷೆಯಿಂದ ಸವಾಲನ್ನು ಸ್ವೀಕರಿಸಿದ್ದು, ಡೈನಮಿಕ್ ಬಾಂಡ್ ಫಂಡ್ಸ್, ಲಾಂಗ್ ಡ್ಯುರೇಷನ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಒಂದೊಮ್ಮೆ ಬಡ್ಡಿದರ ಇಳಿಕೆ ಕಂಡಲ್ಲಿ ಅದರಿಂದ ಈ ಹೂಡಿಕೆದಾರರಿಗೆ ಪ್ರಯೋಜನ ಆಗಲಿದೆ ಎಂದು ಅವರು ತಿಳಿಸಿದ್ದಾರೆ.
ಬಡ್ಡಿದರ ಕಡಿತ ಮಾಡುವ ಪ್ರವೃತ್ತಿ ಆರಂಭ ಆಗುವ ಬಗ್ಗೆ ಸ್ಪಷ್ಟನೆ ದೊರೆತ ನಂತರದಲ್ಲಿ ಬಂಡವಾಳ ಒಳಹರಿವು ಆರಂಭ ಆಗಲಿದೆ ಎಂದು ಹೇಳಿದ್ದಾರೆ.
ಡೆಟ್ ಫಂಡ್‌ಗಳ ನಿರ್ವಹಣಾ ಸಂಪತ್ತು
₹14 ಲಕ್ಷ ಕೋಟಿ ಆಗಸ್ಟ್ ತಿಂಗಳ ಅಂತ್ಯಕ್ಕೆ
₹14.17 ಲಕ್ಷ ಕೋಟಿ ಜುಲೈ ತಿಂಗಳ ಅಂತ್ಯಕ್ಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.