ನವದೆಹಲಿ: ಇಸ್ರೇಲ್ ಮೇಲೆ ದಾಳಿ ನಡೆಸುತ್ತಿರುವ ಇರಾನ್, ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ತಡೆಯೊಡ್ಡಿದರೆ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ (ಎನ್‌ಎಲ್‌ಜಿ) ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಹಾರ್ಮುಜ್ ಜಲಸಂಧಿ ಮೂಲಕ ಸೌದಿ ಅರೇಬಿಯಾ, ಇರಾಕ್, ಯುಎಇಯಿಂದ ಭಾರತಕ್ಕೆ ಕಚ್ಚಾ ತೈಲ ಮತ್ತು ಎನ್‌ಎಲ್‌ಜಿ ಪೂರೈಕೆಯಾಗುತ್ತಿದೆ. ಈ ಮಾರ್ಗದಲ್ಲಿ ಹಡಗುಗಳ ಸಂಚಾರ ಸ್ಥಗಿತಗೊಂಡರೆ ಕಚ್ಚಾ ತೈಲದ ಬೆಲೆ ಏರಿಕೆಯಾಗಲಿದೆ. ಇದು ಹಣದುಬ್ಬರದ ಹೆಚ್ಚಳಕ್ಕೂ ಕಾರಣವಾಗಲಿದೆ ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ಉಲ್ಬಣಿಸಿದೆ. ಸದ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 90 ಡಾಲರ್‌ನ ಆಸುಪಾಸಿನಲ್ಲಿದೆ.
‘ಈ ಜಲಸಂಧಿಯನ್ನು ಸಂಪೂರ್ಣ ಅಥವಾ ಭಾಗಶಃ ಬಂದ್ ಮಾಡಿದರೂ ಕಚ್ಚಾ ತೈಲ, ಎಲ್‌ಎನ್‌ಜಿ ಬೆಲೆ ಏರಿಕೆಯಾಗಲಿದೆ’ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.
ಇರಾನ್ ಮತ್ತು ಒಮನ್ ನಡುವೆ ಇರುವ ಈ ಜಲಸಂಧಿಯು ಕಿರಿದಾದ ಸಮುದ್ರ ಮಾರ್ಗವಾಗಿದ್ದು, 40 ಕಿ.ಮೀನಷ್ಟು ವಿಸ್ತಾರ ಹೊಂದಿದೆ. ಈ ಪೈಕಿ 2 ಕಿ.ಮೀ. ವ್ಯಾಪ್ತಿ ಪ್ರದೇಶವು ಸರಕು ಸಾಗಣೆ ಹಡಗುಗಳು ಸಂಚಾರಕ್ಕೆ ಯೋಗ್ಯವಾಗಿದೆ. ಈ ಮಾರ್ಗವಾಗಿಯೇ ಭಾರತಕ್ಕೆ ಕಚ್ಚಾ ತೈಲ ಪೂರೈಕೆಯಾಗುತ್ತದೆ ಎಂದು ತಿಳಿಸಿದೆ.
ಪ್ರತಿದಿನ ಈ ಮಾರ್ಗವಾಗಿ 2.1 ಕೋಟಿ ಬ್ಯಾರೆಲ್‌ನಷ್ಟು ಕಚ್ಚಾತೈಲ ಪೂರೈಕೆಯಾಗುತ್ತದೆ. ಜಾಗತಿಕಮಟ್ಟದಲ್ಲಿನ ಒಟ್ಟು ಎಲ್‌ಎನ್‌ಜಿ ರಫ್ತಿನ ಪೈ ಶೇ 20ರಷ್ಟನ್ನು ಈ ಮಾರ್ಗದಿಂದ ಪೂರೈಸಲಾಗುತ್ತದೆ. ಕತಾರ್, ಯುಎಇ ದ್ರವೀಕೃತ ನೈಸರ್ಗಿಕ ಅನಿಲದ ರಫ್ತಿಗೆ ಈ ಜಲಸಂಧಿಯನ್ನೇ ಅವಲಂಬಿಸಿವೆ ಎಂದು ತಿಳಿಸಿದೆ.
‘ಭಾರತದ ಕಚ್ಚಾ ತೈಲದ ಬೇಡಿಕೆಯ ಪೈಕಿ ಶೇ 85ರಷ್ಟು ಪೂರೈಕೆಯು ಸಾಗರೋತ್ತರದ ಆಮದಿನ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ದಿಗ್ಬಂಧನ ಹೇರಿದರೆ ಪೂರೈಕೆ ಸರಪಳಿಯಲ್ಲಿ ವ್ಯತ್ಯಯವಾಗಲಿದೆ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.