ನವದೆಹಲಿ: ಭಾರತದ ಇಂಧನ ಅಗತ್ಯವನ್ನು ಈಡೇರಿಸಲು ಇರಾನ್ ಸಿದ್ಧವಿದೆ ಎಂದು ಭಾರತದಲ್ಲಿನ ಇರಾನ್ ರಾಯಭಾರಿಅಲಿ ಚೆಗೆನಿ ಅವರು ಕೇಂದ್ರ ಸರ್ಕಾರಕ್ಕೆ ಶುಕ್ರವಾರ ತಿಳಿಸಿದ್ದಾರೆ.
ಇರಾನ್ ಮೇಲಿನ ಆರ್ಥಿಕ ನಿರ್ಬಂಧವನ್ನು ತೆಗೆದುಹಾಕುವ ಸಂಬಂಧ ವಿಶ್ವದ ಬಲಿಷ್ಠ ರಾಷ್ಟ್ರಗಳು ಮತ್ತು ಇರಾನ್ ಮಧ್ಯೆ ಸಂಧಾನ ಮಾತುಕತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ.
ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ಪೂರೈಕೆಯಲ್ಲಿ ಇರಾನ್ ಎರಡನೇ ಸ್ಥಾನದಲ್ಲಿತ್ತು. ಆದರೆ, ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ತೈಲ ರಫ್ತು ಮಾಡುವುದಕ್ಕೆ ನಿರ್ಬಂಧ ಹೇರಿದ್ದರಿಂದಾಗಿ ಭಾರತವು ಇರಾನ್‌ನಿಂದ ತೈಲ ಆಮದು ಮಾಡುವುದನ್ನು ನಿಲ್ಲಿಸಬೇಕಾಯಿತು.
ರೂಪಾಯಿ ಹಾಗೂ ಇರಾನ್‌ನ ಕರೆನ್ಸಿಯಾದ ರಿಯಾಲ್ ಬಳಸಿ ವ್ಯವಹಾರ ನಡೆಸುವುದರಿಂದ ಎರಡೂ ದೇಶಗಳ ಕಂಪನಿಗಳಿಗೆ ಅನುಕೂಲ ಆಗಲಿದೆ ಎಂದು ಚೆಗೆನಿ ಹೇಳಿರುವುದಾಗಿ ‘ಎಂವಿಐಆರ್‌ಡಿಸಿ ವಿಶ್ವ ವ್ಯಾಪಾರ ಕೇಂದ್ರ’ವು ತಿಳಿಸಿದೆ.
ಭಾರತ ಮತ್ತು ಇರಾನ್ ದೇಶಗಳು ವ್ಯಾಪಾರ ನಡೆಸಲು ವಸ್ತು ವಿನಿಯಮ ಸ್ವರೂಪದ ವ್ಯವಸ್ಥೆ ಹೊಂದಿವೆ. ಭಾರತದ ತೈಲ ಸಂಸ್ಕರಣಾ ಕಂಪನಿಗಳು ಇರಾನ್ ತೈಲಕ್ಕೆ ಸ್ಥಳೀಯ ಬ್ಯಾಂಕ್‌ಗಳಲ್ಲಿ ರೂಪಾಯಿ ಲೆಕ್ಕದಲ್ಲಿ ಹಣ ಪಾವತಿಸುತ್ತವೆ. ಈ ಹಣವನ್ನು ಇರಾನ್, ಭಾರತದಿಂದ ತನಗೆ ಅಗತ್ಯವಿರುವ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಬಳಸುತ್ತಿದೆ.
ಭಾರತ–ಇರಾನ್ ವ್ಯಾಪಾರವು ₹ 1.29 ಲಕ್ಷ ಕೋಟಿ ಇದ್ದಿದ್ದು, ಅಮೆರಿಕವು ಇರಾನ್ ಮೇಲೆ ವಿಧಿಸಿದ ನಿರ್ಬಂಧಗಳಿಂದಾಗಿ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಜನವರಿ ಅವಧಿಯಲ್ಲಿ ₹ 15,200 ಕೋಟಿಗೂ ಕಡಿಮೆ ಮೊತ್ತಕ್ಕೆ ಇಳಿದಿದೆ.
ಎರಡೂ ದೇಶಗಳು ರೂಪಾಯಿ–ರಿಯಾಲ್ ಪಾವತಿ ವ್ಯವಸ್ಥೆ ಬಳಸಿದರೆ ದ್ವಿಪಕ್ಷೀಯ ವ್ಯಾಪಾರವು ₹ 2.28 ಲಕ್ಷ ಕೋಟಿಗೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಚೆಗೆನಿ ತಿಳಿಸಿದ್ದಾರೆ.
ತೈಲ ಉತ್ಪಾದನೆ ಕಡಿತ ಹೆಚ್ಚಳ: ಒಪೆಕ್+ ದೇಶಗಳು ತಾವು ನಿಗದಿ ಮಾಡಿಕೊಂಡಿರುವ ಗುರಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಕಚ್ಚಾತೈಲ ಉತ್ಪಾದಿಸುತ್ತಿವೆ. ಕಚ್ಚಾ ತೈಲ ಉತ್ಪಾದನೆ ಕಡಿತ ಪ್ರಮಾಣವು ಜನವರಿಯಲ್ಲಿ ಶೇ 129ರಷ್ಟು ಇದ್ದಿದ್ದು ಫೆಬ್ರುವರಿಯಲ್ಲಿ ಶೇ 136ಕ್ಕೆ ಏರಿಕೆ ಆಗಿದೆ ಎಂದು ಮೂಲಗಳು ಹೇಳಿವೆ.
ತಗ್ಗಿದ ಉತ್ಪಾದನೆ: ಹಲವು ದೇಶಗಳು ಉತ್ಪಾದನೆ ಹೆಚ್ಚಿಸಲು ಕಷ್ಟಪಡುತ್ತಿವೆ. ಇದೇ ವೇಳೆ ಒಪೆಕ್+ ದೇಶಗಳು ಉತ್ಪಾದನಾ ಕಡಿತವನ್ನು ಕ್ರಮೇಣ ತಗ್ಗಿಸಲಿವೆ.
ಪಾಶ್ಚಾತ್ಯ ದೇಶಗಳು ರಷ್ಯಾ ಮೇಲೆ ನಿರ್ಬಂಧ ಹೇರಿರುವುದರಿಂದ ಆ ದೇಶದ ಕಚ್ಚಾ ತೈಲ ಉತ್ಪಾದನೆ ಕಡಿಮೆ ಆಗುವ ಸಾಧ್ಯತೆ ಇದೆ. ಹೀಗಾಗಿ ಅಮೆರಿಕ ಮತ್ತು ಹಲವು ದೇಶಗಳು ತ್ವರಿತವಾಗಿ ಉತ್ಪಾದನೆ ಹೆಚ್ಚಿಸುವಂತೆ ಒಪೆಕ್ ದೇಶಗಳನ್ನು ಒತ್ತಾಯಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.