ನವದೆಹಲಿ: ವಿಮಾ ಕಂಪನಿಗಳು ಆರೋಗ್ಯ ವಿಮೆಗೆ ಸಂಬಂಧಿಸಿದ ಕ್ಲೇಮ್‌ಗಳನ್ನು ಇತ್ಯರ್ಥ ಮಾಡುವಾಗ ಇನ್ನಷ್ಟು ಪಾರದರ್ಶಕವಾಗಿ ನಡೆದುಕೊಳ್ಳಬೇಕು ಎಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಸೂಚಿಸಿದೆ. ಅಲ್ಲದೆ, ಪಾಲಿಸಿ ಹೊಂದಿರುವವರು ಸಲ್ಲಿಸಿದ ಕ್ಲೇಮ್ ಅರ್ಜಿ ತಿರಸ್ಕೃತ ಆದಲ್ಲಿ, ಹಾಗೆ ಆಗಿದ್ದು ಏಕೆ ಎಂಬುದನ್ನು ವಿಮಾ ಕಂಪನಿಗಳು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದೂ ಪ್ರಾಧಿಕಾರ ತಾಕೀತು ಮಾಡಿದೆ.
ಎಲ್ಲ ವಿಮಾ ಕಂಪನಿಗಳು ಕ್ಲೇಮ್ ಇತ್ಯರ್ಥಪಡಿಸುವ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಗ್ರಾಹಕರಿಗೆ ಸ್ಪಷ್ಟವಾದ ಹಾಗೂ ಪಾರದರ್ಶಕ ರೀತಿಯಲ್ಲಿ ಸಂದೇಶ ರವಾನೆ ಆಗುತ್ತಿರುವಂತೆ ಮಾಡುವುದು ಮುಖ್ಯ ಎಂದು ಪ್ರಾಧಿಕಾರವು ಸುತ್ತೋಲೆಯಲ್ಲಿ ಹೇಳಿದೆ.
‘ವಿಮೆಯ ಗ್ರಾಹಕರು ತಾವು ಸಲ್ಲಿಸುವ ಕ್ಲೇಮ್ ಅರ್ಜಿಗಳ ಸ್ಥಿತಿ ಏನಿದೆ ಎಂಬುದನ್ನು ತಿಳಿದುಕೊಳ್ಳುವಂತಾಗಲು ಎಲ್ಲ ವಿಮಾ ಕಂಪನಿಗಳು ವೆಬ್‌ಸೈಟ್, ಪೋರ್ಟಲ್ ಅಥವಾ ಆ್ಯಪ್‌ನ ವ್ಯವಸ್ಥೆ ಕಲ್ಪಿಸಬೇಕು. ಗ್ರಾಹಕರು ಸಲ್ಲಿಸಿದ ಅರ್ಜಿಯನ್ನು ಕಂಪನಿಗಳು ಸ್ವೀಕರಿಸಿದಾಗಿನಿಂದ, ಆ ಅರ್ಜಿಯನ್ನು ಇತ್ಯರ್ಥಪಡಿಸುವವರೆಗಿನ ಹಂತಗಳನ್ನು ತಿಳಿದುಕೊಳ್ಳುವ ಸೌಲಭ್ಯ ಇರಬೇಕು’ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
ಕ್ಲೇಮ್ ಅರ್ಜಿಗಳನ್ನು ವಿಮಾ ಕಂಪನಿಗಳ ಪರವಾಗಿ ಮಧ್ಯವರ್ತಿಗಳು (ಟಿಪಿಎ) ಇತ್ಯರ್ಥಪಡಿಸುತ್ತಿದ್ದರೆ, ಕಂಪನಿಗಳಿಂದ ಬರುವ ಎಲ್ಲ ಸಂದೇಶಗಳು ವಿಮೆಯ ಪಾಲಿಸಿ ಹೊಂದಿರುವವರಿಗೆ ಕೂಡ ಸಿಗುವಂತೆ ಆಗಬೇಕು ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.