ನವದೆಹಲಿ: ವಿದೇಶಿ ನಿಯಂತ್ರಿತ ಮೊಬೈಲ್ ಕಂಪನಿಗಳ ಮೇಲೆ ಈಚೆಗೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಕೋಟಿಗಟ್ಟಲೆ ರೂಪಾಯಿ ಮೌಲ್ಯದ ವಂಚನೆ ನಡೆದಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಶುಕ್ರವಾರ ತಿಳಿಸಿದೆ.
ಮೊಬೈಲ್ ಕಮ್ಯುನಿಕೇಷನ್ ಮತ್ತು ನಿರ್ಮಾಣ ಕಂಪನಿಗಳ ಮೇಲೆ ಕರ್ನಾಟಕ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ನಡೆಸಿದ ಐಟಿ ದಾಳಿಯಲ್ಲಿ ₹6,500 ಕೋಟಿಗೂ ಹೆಚ್ಚು ಮೌಲ್ಯದ ಲೆಕ್ಕವಿಲ್ಲದ ಆದಾಯವನ್ನು ಪತ್ತೆ ಹಚ್ಚಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.
ಡಿಸೆಂಬರ್ 21ರಂದು ಕರ್ನಾಟಕ ಸೇರಿದಂತೆ ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಬಿಹಾರ, ರಾಜಸ್ಥಾನ ಮತ್ತು ದೆಹಲಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಎರಡು ಪ್ರಮುಖ ಕಂಪನಿಗಳು ರಾಯಲ್ಟಿ ಸ್ವರೂಪದಲ್ಲಿ ವಿದೇಶದಲ್ಲಿರುವ ತನ್ನ ಗ್ರೂಪ್ ಕಂಪನಿಗಳ ಪರವಾಗಿ ₹5,500 ಕೋಟಿಗೂ ಹೆಚ್ಚು ಹಣ ಸಂದಾಯ ಮಾಡಿದೆ ಎಂದು ಬಹಿರಂಗವಾಗಿದೆ.
ಶೋಧನಾ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಲಾದ ಹೆಚ್ಚಿನ ಆದಾಯಗಳಿಗೆ ಸೂಕ್ತ ದಾಖಲೆಗಳಿಲ್ಲ ಎಂದು ಸಿಬಿಡಿಟಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.