ADVERTISEMENT

ಲೆಕ್ಕಪತ್ರ ಇರದ ₹ 878 ಕೋಟಿ ಆದಾಯ ಪತ್ತೆ: ಸಿಬಿಡಿಟಿ

ಬೆಂಗಳೂರು ಮೂಲದ ಮದ್ಯ ತಯಾರಿಕೆ ಕಂಪನಿ ಮೇಲೆ ದಾಳಿ

ಪಿಟಿಐ
Published 11 ಫೆಬ್ರುವರಿ 2021, 19:19 IST
Last Updated 11 ಫೆಬ್ರುವರಿ 2021, 19:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬೆಂಗಳೂರಿನಲ್ಲಿರುವ ಮದ್ಯ ತಯಾರಿಕೆಯ ಬೃಹತ್‌ ಕಂಪನಿ ಮೇಲೆ ದಾಳಿ ನಡೆಸಿದ ವೇಳೆ, ಲೆಕ್ಕಪತ್ರ ಇರದ ₹ 878.52 ಕೋಟಿ ಆದಾಯ ‍‍ಪತ್ತೆ ಮಾಡಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಗುರುವಾರ ತಿಳಿಸಿದೆ.

‘ಕಂಪನಿಗೆ ಸೇರಿದ 26 ಸ್ಥಳಗಳ ಮೇಲೆ ಫೆ. 9ರಂದು ದಾಳಿ ನಡೆಸಿ, ದಾಖಲೆಗಳನ್ನು ಜಪ್ತಿ ಮಾಡಲಾಗಿತ್ತು. ದಾಖಲೆಗಳ ಪರಿಶೀಲನೆ ನಂತರ ಬಹಿರಂಗಪಡಿಸದ ₹ 878 ಕೋಟಿ ಆದಾಯವನ್ನು ಪತ್ತೆ ಮಾಡಲಾಯಿತು’ ಎಂದು ಸಿಬಿಡಿಟಿ ಪ್ರಕಟಣೆ ತಿಳಿಸಿದೆ.

‘ಕಂಪನಿಯು ಭಾರಿ ಪ್ರಮಾಣದ ಜಮೀನು ಹೊಂದಿದೆ. ಈ ಜಮೀನನ್ನು ವಸತಿ ನಿವೇಶನ ಹಾಗೂ ವಾಣಿಜ್ಯ ಉದ್ದೇಶದ ಬಳಕೆಗಾಗಿ ಬೆಂಗಳೂರು ಮೂಲದ ಬಿಲ್ಡರ್‌ ನೆರವಿನೊಂದಿಗೆ ಅಭಿವೃದ್ಧಿಪಡಿಸುತ್ತಿದೆ’ ಎಂದೂ ಪ್ರಕಟಣೆ ತಿಳಿಸಿದೆ.

ADVERTISEMENT

‘ಬೆಂಗಳೂರಿನಲ್ಲಿರುವ ಬಿಲ್ಡರ್‌ನೊಂದಿಗೆ ಕೈಗೊಂಡಿರುವ ಪ್ರಾಜೆಕ್ಟ್‌ಗಳಿಂದ ₹ 692.82 ಕೋಟಿಗೂ ಅಧಿಕ ಆದಾಯವನ್ನು ಕಂಪನಿ ಗಳಿಸಿದೆ. ಆದರೆ, ಈ ಆದಾಯವನ್ನು ಮರೆಮಾಚಿದೆ. ಈ ಆರೋಪಗಳನ್ನು ಪುಷ್ಟೀಕರಿಸುವ ಸಾಕ್ಷ್ಯಗಳನ್ನು ಸಹ ಪತ್ತೆ ಮಾಡಲಾಗಿದೆ’ ಎಂದು ಸಿಬಿಡಿಟಿ ತಿಳಿಸಿದೆ.

‘ಕಂಪನಿಯ ನಿರ್ದೇಶಕರೊಬ್ಬರ ಹೆಸರಿನಲ್ಲಿ ವಿದೇಶಗಳಲ್ಲಿ ಸ್ವತ್ತುಗಳಿರುವುದನ್ನು ಸಹ ಪತ್ತೆ ಮಾಡಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.