ADVERTISEMENT

ಮೈಕ್ರೊಸಾಫ್ಟ್‌ ವಿಂಡೋಸ್‌ ತಾಂತ್ರಿಕ ದೋಷ: 85 ಲಕ್ಷ ಸಾಧನಗಳ ಕಾರ್ಯಕ್ಕೆ ಅಡ್ಡಿ

ಪಿಟಿಐ
Published 21 ಜುಲೈ 2024, 15:13 IST
Last Updated 21 ಜುಲೈ 2024, 15:13 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ವಿಂಡೋಸ್‌ನಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲು ನೂರಕ್ಕೂ ಹೆಚ್ಚು ಎಂಜಿನಿಯರ್‌ಗಳು ಮತ್ತು ಪರಿಣತರನ್ನು ನಿಯೋಜಿಸಲಾಗಿತ್ತು ಎಂದು ಅಮೆರಿಕದ ಟೆಕ್‌ ಕಂಪನಿ ಮೈಕ್ರೊಸಾಫ್ಟ್‌ ಹೇಳಿದೆ.

ಕ್ರೌಡ್​ಸ್ಟ್ರೈಕ್‌ ಕಂಪನಿಯು ವಿಂಡೋಸ್‌ನಲ್ಲಿ ಫಾಲ್ಕನ್‌ ಸೆನ್ಸಾರ್‌ ತಂತ್ರಾಂಶವನ್ನು ಅಪ್‌ಡೇಟ್‌ ಮಾಡುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರಿಂದ ವಿಶ್ವದಾದ್ಯಂತ 85 ಲಕ್ಷ ಎಲೆಕ್ಟ್ರಾನಿಕ್‌ ಸಾಧನಗಳ ಕಾರ್ಯ ನಿರ್ವಹಣೆಗೆ ಅಡ್ಡಿಯಾಗಿತ್ತು. ಸಮಸ್ಯೆ ಪರಿಹರಿಸಿ ಯಥಾಸ್ಥಿತಿಗೆ ತರುವ ಬಗ್ಗೆ ಗ್ರಾಹಕರ ಜೊತೆಗೆ ನೇರವಾಗಿ ಸಂಪರ್ಕ ಬೆಸೆಯಲು ಪರಿಣತರನ್ನು ನಿಯೋಜಿಸಲಾಗಿತ್ತು ಎಂದು  ಮೈಕ್ರೊಸಾಫ್ಟ್ ತನ್ನ ಬ್ಲಾಗ್‌ ಬರಹದಲ್ಲಿ ತಿಳಿಸಿದೆ.

ತಾಂತ್ರಿಕ ದೋಷವು ಭಾರತದ ವಿಮಾನಯಾನ ಸೇವೆ ಸೇರಿ ವಿಶ್ವದ ಹಲವು ವಲಯಗಳ ಸೇವೆಯಲ್ಲಿ ವ್ಯತ್ಯಯಕ್ಕೆ ಕಾರಣವಾಗಿತ್ತು. 

ADVERTISEMENT

ಗೂಗಲ್‌ ಕ್ಲೌಡ್‌ ಪ್ಲಾಟ್‌ಪಾರ್ಮ್‌ (ಜಿಪಿಸಿ), ಅಮೆಜಾನ್‌ ವೆಬ್‌ ಸರ್ವಿಸ್‌ (ಎಡಬ್ಲ್ಯುಎಸ್‌) ಸೇರಿ ಕ್ಲೌಡ್‌ ಸೇವಾ ಪೂರೈಕೆದಾರರ ಸಹಭಾಗಿತ್ವದ ಮೂಲಕ ಬಳಕೆದಾರರಿಗೆ ಸಮಸ್ಯೆ ಬಗ್ಗೆ ಅರಿವು ಮೂಡಿಸಲಾಯಿತು ಎಂದು ಹೇಳಿದೆ.

ಹಲವು ಜನರ ದೈನಂದಿನ ವ್ಯಾ‍‍ಪಾರ ವಹಿವಾಟಿನ ಮೇಲೆ ಈ ಸಮಸ್ಯೆಯು ಪರಿಣಾಮ ಬೀರಿದೆ. ಹಾಗಾಗಿ, ಬಳಕೆದಾರರಿಗೆ ತಾಂತ್ರಿಕ ಮಾರ್ಗದರ್ಶನ ಮತ್ತು ವಿಂಡೋಸ್‌ ಸೇವೆಯನ್ನು ವ್ಯವಸ್ಥಿತವಾಗಿ ಮತ್ತೆ ಮರುಸ್ಥಾಪಿಸಲು ನಮ್ಮ ಗಮನ ಕೇಂದ್ರೀಕರಿಸಲಾಗಿತ್ತು ಎಂದು ಹೇಳಿದೆ.‌

ಜಾಗತಿಕ ಮಟ್ಟದಲ್ಲಿ ಕ್ಲೌಡ್‌ ಸೇವಾ ಪೂರೈಕೆದಾರರು, ಸಾಫ್ಟ್‌ವೇರ್‌ ವೇದಿಕೆಗಳು, ಸೈಬರ್‌ ಸೇವಾ ಪೂರೈಕೆದಾರರು, ಸಾಫ್ಟ್‌ವೇರ್‌ ಪೂರೈಕೆದಾರರು ಮತ್ತು ಬಳಕೆದಾರರ ನಡುವೆ ತಾಂತ್ರಿಕ ವ್ಯವಸ್ಥೆಯ ಸ್ವರೂಪ ಹೇಗೆ ಒಂದಕ್ಕೊಂದು ಬೆಸೆದುಕೊಂಡಿದೆ ಎಂಬುದು ಇದರಿಂದ ಅರಿವಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.