ADVERTISEMENT

2000 TCS ನೌಕರರ ವರ್ಗಾವಣೆ: ಕಾರ್ಮಿಕ ಸಚಿವರಿಗೆ ದೂರು ನೀಡಿದ NITE ಸೆನೆಟ್

ಪಿಟಿಐ
Published 18 ನವೆಂಬರ್ 2023, 9:21 IST
Last Updated 18 ನವೆಂಬರ್ 2023, 9:21 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ರಾಯಿಟರ್ಸ್ ಚಿತ್ರ

ನವದೆಹಲಿ: ದೇಶದ ವಿವಿಧ ನಗರಗಳಲ್ಲಿರುವ ಕಂಪನಿಯ ಕಚೇರಿಗಳಿಗೆ ಸುಮಾರು ಎರಡು ಸಾವಿರ ಉದ್ಯೋಗಿಗಳನ್ನು ವರ್ಗಾವಣೆ ಮಾಡಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ (ಟಿಸಿಎಸ್‌) ಕ್ರಮದ ವಿರುದ್ಧ ಕೇಂದ್ರ ಕಾರ್ಮಿಕ ಸಚಿವರಿಗೆ ನಾಸೆಂಟ್‌ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳ ಸೆನೆಟ್‌ (ಎನ್‌ಐಟಿಇಎಸ್‌) ದೂರು ನೀಡಿದೆ.

‘ಅನೈತಿಕ ವರ್ಗಾವಣೆ ಪದ್ಧತಿ’ ಎಂದಿರುವ ಸೆನೆಟ್‌, ಈವರೆಗೂ ಟಿಸಿಎಸ್‌ ವಿರುದ್ಧ ಸುಮಾರು 180 ದೂರುಗಳು ಸಲ್ಲಿಕೆಯಾಗಿವೆ. ವರ್ಗಾವಣೆ ಒಪ್ಪಿಕೊಳ್ಳಲು ವ್ಯವಸ್ಥಿತವಾಗಿ ಒತ್ತಡ ಹೇರಲಾಗುತ್ತಿದೆ. ಇದರಿಂದ ಉದ್ಯೋಗಿಗಳಿಗೆ ಹಾಗೂ ಅವರ ಕುಟುಂಬದವರಿಗೆ ತೀವ್ರ ತೊಂದರೆ ಉಂಟಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಲಾಗಿದೆ.

ವರ್ಗಾವಣೆ ಆದೇಶವನ್ನು ಪಾಲಿಸದಿದ್ದರೆ ಶಿಸ್ತು ಕ್ರಮ ಜರುಗಿಸುವುದಾಗಿ ಉದ್ಯೋಗಿಗಳಿಗೆ ಕಂಪನಿ ಎಚ್ಚರಿಸಿದೆ ಎಂದು ಪುಣೆ ಮೂಲದ ಸೆನೆಟ್ ಆರೋಪಿಸಿದೆ.

‘ಈ ಅನೈತಿಕ ವರ್ಗಾವಣೆ ಪದ್ಧತಿ ಅಳವಡಿಸಿಕೊಂಡಿರುವ ಟಿಸಿಎಸ್‌ ವಿರುದ್ಧ ತನಿಖೆ ನಡೆಸುವಂತೆ ಸಚಿವರನ್ನು ಕೋರಲಾಗಿದೆ. ಇಂಥ ವರ್ಗಾವಣೆ ಪದ್ಧತಿಯಿಂದ ನೌಕರರನ್ನು ಹಾಗೂ ಅವರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಸೆನೆಟ್ ಕೋರಿದೆ.

‘ಐಟಿ ಕ್ಷೇತ್ರದಲ್ಲಿ ವರ್ಗಾವಣೆ ಕುರಿತು ನೀತಿಯೊಂದನ್ನು ಕೇಂದ್ರ ಸರ್ಕಾರ ರೂಪಿಸಬೇಕು. ಆ ಮೂಲಕ ಐಟಿ ನೌಕರರ ಹಿತ ಕಾಯಬೇಕು. ಅವರ ಹಕ್ಕುಗಳನ್ನು ರಕ್ಷಿಸಬೇಕು’ ಎಂದು ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಅವರಿಗೆ ಬರೆದಿರುವ ಪತ್ರದಲ್ಲಿ ಸೆನೆಟ್ ಕೊರಿದೆ.

‘ಐಟಿ ನೌಕರರ ಹಿತ ಕಾಯಲು ಸೆನೆಟ್ ಸದಾ ಬದ್ಧವಿದೆ. ಇಂಥ ಅನೈತಿಕ ವರ್ಗಾವಣೆ ಪದ್ಧತಿ ಮತ್ತು ಒತ್ತಾಯದ ವರ್ಗಾವಣೆಗೆ ವಿರುದ್ಧ ಸದಾ ಹೋರಾಡಲಿದೆ’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.