ADVERTISEMENT

ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕ: ಐಟಿಸಿ ಲಾಭ ಶೇ 16ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2023, 16:19 IST
Last Updated 14 ಆಗಸ್ಟ್ 2023, 16:19 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಐಟಿಸಿ ಲಿಮಿಟೆಡ್‌ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಶೇಕಡ 16.08ರಷ್ಟು ಹೆಚ್ಚಾಗಿ ₹5,180 ಕೋಟಿಗೆ ತಲುಪಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭವು ₹4,462 ಕೋಟಿ ಆಗಿತ್ತು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಕಾರ್ಯಾಚರಣೆ ವರಮಾನ ಶೇ 6ರಷ್ಟು ಇಳಿಕೆ ಕಂಡು ₹18,639 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ವರಮಾನ ₹19,831 ಕೋಟಿ ಇತ್ತು. ಒಟ್ಟು ವರಮಾನ ಶೇ 3.92ರಷ್ಟು ಇಳಿಕೆ ಕಂಡು ₹19,361.78 ಕೋಟಿಯಷ್ಟು ಆಗಿದೆ.

ADVERTISEMENT

ಕಂಪನಿಯ ವೆಚ್ಚದ ಪ್ರಮಾಣ ಶೇ 12.53ರಷ್ಟು ಇಳಿಕೆ ಕಂಡು ₹12,421.77 ಕೋಟಿಗೆ ತಲುಪಿದೆ.

ಎಫ್‌ಎಂಸಿಜಿ ವಹಿವಾಟಿನಿಂದ ಜೂನ್‌ ತ್ರೈಮಾಸಿಕದಲ್ಲಿ ಬಂದಿರುವ ವರಮಾನದಲ್ಲಿ ಶೇ 13.46ರಷ್ಟು ಹೆಚ್ಚಳ ಆಗಿದ್ದು ₹13,528 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹11,922 ಕೋಟಿ ಇತ್ತು.

ಹೋಟೆಲ್‌ ವರಮಾನ ಶೇ 7.6ರಷ್ಟು ಹೆಚ್ಚಾಗಿ ₹625 ಕೋಟಿಯಷ್ಟು ಆಗಿದೆ. ಹಿಂದಿನ ಅವಧಿಯಲ್ಲಿ ₹580 ಕೋಟಿ ಇತ್ತು ಎಂದು ಮಾಹಿತಿ ನೀಡಿದೆ.

ಪ್ರತಿ 10 ಷೇರಿಗೆ ಐಟಿಸಿ ಹೋಟೆಲ್‌ನ 1 ಷೇರು

ಕೋಲ್ಕತ್ತ: ಐಟಿಸಿ ಲಿಮಿಟೆಡ್‌ನ ಪ್ರತಿ 10 ಷೇರಿಗೆ ಐಟಿಸಿ ಹೋಟೆಲ್ಸ್‌ನ 1 ಷೇರು ಸಿಗಲಿದೆ ಎಂದು ಕಂಪನಿಯು ತಿಳಿಸಿದೆ. ಐಟಿಸಿ ಲಿಮಿಟೆಡ್‌ನಿಂದ ಹೋಟೆಲ್‌ ವಹಿವಾಟನ್ನು ಪ್ರತ್ಯೇಕಿಸಲು ಆಡಳಿತ ಮಂಡಳಿ ಒಪ್ಪಿಗೆ ನೀಡಿದ್ದು ಹೊಸದಾಗಿ ರೂಪುಗೊಳ್ಳುವ ಕಂಪನಿಗೆ ‘ಐಟಿಸಿ ಹೋಟೆಲ್ಸ್‌ ಲಿಮಿಟೆಡ್‌’ ಎಂದು ಹೆಸರಿಡಲಾಗಿದೆ. ವಿಲೀನ ಯೋಜನೆ ಜಾರಿಗೆ ಬಂದ ಬಳಿಕ ಐಟಿಸಿ ಲಿಮಿಟೆಡ್‌ನ ಷೇರುದಾರರು ಐಟಿಸಿ ಹೋಟೆಲ್ಸ್‌ನಲ್ಲಿ ಒಟ್ಟು ಶೇ 60ರಷ್ಟು ಷೇರುಪಾಲು ಹೊಂದಲಿದ್ದಾರೆ. ಇನ್ನುಳಿದ ಶೇ 40ರಷ್ಟು ಐಟಿಸಿ ಬಳಿ ಉಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.