ಬೆಂಗಳೂರು: ಐಟಿಸಿ ಲಿಮಿಟೆಡ್‌ನ ನಿವ್ವಳ ಲಾಭವು 2023ರ ಮಾರ್ಚ್‌ಗೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 22.66ರಷ್ಟು ಹೆಚ್ಚಾಗಿ ₹5,225 ಕೋಟಿಗೆ ತಲುಪಿದೆ.
ಕಂಪನಿಯು 2022ರ ಮಾರ್ಚ್‌ಗೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ₹4,259 ಕೋಟಿಯಷ್ಟು ಲಾಭ ಗಳಿಸಿತ್ತು ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.
ಕಾರ್ಯಾಚರಣಾ ವರಮಾನವು ಶೇ 7ರಷ್ಟು ಹೆಚ್ಚಾಗಿ ₹18,799 ಕೋಟಿಗೆ ತಲುಪಿದೆ. ಹಿಂದಿನ ಅವಧಿಯಲ್ಲಿ ₹17,754 ಕೋಟಿಯಷ್ಟು ಇತ್ತು.
ಕಂಪನಿಯ ಒಟ್ಟು ವೆಚ್ಚವು ಶೇ 2.18ರಷ್ಟು ಹೆಚ್ಚಾಗಿದ್ದು ₹12,907 ಕೋಟಿಗೆ ತಲುಪಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟು ವರಮಾನ ಶೇ 7.75ರಷ್ಟ ಏರಿಕೆ ಕಂಡು ₹19,667 ಕೋಟಿ ಆಗಿದೆ.
ಎಲ್ಲಾ ವಿಭಾಗಗಳಲ್ಲಿಯೂ ಉತ್ತಮ ಬೆಳವಣಿಗೆ ಕಂಡಿರುವುದೇ ಲಾಭದಲ್ಲಿ ಹೆಚ್ಚಳ ಆಗಲು ಕಾರಣ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
2022–23ನೇ ಹಣಕಾಸು ವರ್ಷಕ್ಕೆ ನಿವ್ವಳ ಲಾಭ ಶೇ 25.45ರಷ್ಟು ಹೆಚ್ಚಾಗಿ ₹19,427 ಕೋಟಿಗೆ ತಲುಪಿದೆ. ಕಾರ್ಯಾಚರಣಾ ವರಮಾನ ಶೇ 17.34ರಷ್ಟು ಹೆಚ್ಚಾಗಿ ₹75,826 ಕೋಟಿಯಷ್ಟು ಆಗಿದೆ. ಇದೇ ಮೊದಲ ಬಾರಿಗೆ ಕಂಪನಿಯ ಕಾರ್ಯಾಚರಣಾ ವರಮಾನ ₹75 ಸಾವಿರ ಕೋಟಿಯನ್ನು ದಾಟಿದೆ.
ನೇಮಕ: ಕಂಪನಿಗೆ ಸ್ವತಂತ್ರ ನಿರ್ದೇಶಕರನ್ನಾಗಿ ಅಲ್ಕಾ ಮರೇಜ್ಬಾನ್ ಭರುಚಾ ಅವರನ್ನು ಐದು ವರ್ಷಗಳ ಅವಧಿಗೆ ಹಾಗೂ ಹೇಮಂತ್ ಮಾಲಿಕ್ ಅವರನ್ನು ಪೂರ್ಣಾವಧಿ ನಿರ್ದೇಶಕರನ್ನಾಗಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲು ಕಂಪನಿಯ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.
ಲಾಭಾಂಶ
2022–23ನೇ ಹಣಕಾಸು ವರ್ಷಕ್ಕೆ ₹ 1ರ ಮುಖಬೆಲೆಯ ಪ್ರತಿ ಷೇರಿಗೆ ₹6.75ರಷ್ಟು ಅಂತಿಮ ಲಾಭಾಂಶ ಹಾಗೂ ₹2.75 ವಿಶೇಷ ಲಾಭಾಂಶ ನೀಡಲು ಆಡಳಿತ ಮಂಡಳಿಯು ಶಿಫಾರಸು ಮಾಡಿರುವುದಾಗಿ ಕಂಪನಿ ಹೇಳಿದೆ. ಮಧ್ಯಂತರ ಲಾಭಾಂಶ ₹6 ಘೋಷಿಸಲಾಗಿತ್ತು. ಇದರಿಂದಾಗಿ ಒಟ್ಟು ಲಾಭಾಂಶವು ₹15.50ರಷ್ಟು ಆಗಲಿದೆ.
ಮಾರುಕಟ್ಟೆ ಮೌಲ್ಯ ಇಳಿಕೆ (ಪಿಟಿಐ ವರದಿ): ಲಾಭ ಗಳಿಕೆಗೆ ಒಳಗಾಗಿ ಕಂಪನಿಯ ಷೇರು ಶೇ 2ರಷ್ಟು ಇಳಿಕೆ ಕಂಡಿತು. ಇದರಿಂದಾಗಿ ಕಂಪನಿಯ ಮಾರುಕಟ್ಟೆ ಮೌಲ್ಯ ₹9,942 ಕೋಟಿ ಕಡಿಮೆ ಆಗಿದ್ದು ಒಟ್ಟು ಮೌಲ್ಯವು ₹5.21 ಲಕ್ಷ ಕೋಟಿಗೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.