ನವದೆಹಲಿ/ಕೋಲ್ಕತ್ತ: ಐಟಿಸಿ ಲಿಮಿಟೆಡ್ ಕಂಪನಿಯು ತನ್ನ ಹೋಟೆಲ್ ವಹಿವಾಟುಗಳನ್ನು ಪ್ರತ್ಯೇಕಿಸಿ, ‘ಐಟಿಸಿ ಹೋಟೆಲ್ಸ್ ಲಿಮಿಟೆಡ್’ ಹೆಸರಿನ ಕಂಪನಿಯ ಅಧೀನಕ್ಕೆ ತರಲಿದೆ. ಹೋಟೆಲ್ ವಹಿವಾಟುಗಳನ್ನು ಪ್ರತ್ಯೇಕಗೊಳಿಸುವ ಪ್ರಸ್ತಾವಕ್ಕೆ ಐಟಿಸಿ ಲಿಮಿಟೆಡ್‌ನ ಆಡಳಿತ ಮಂಡಳಿಯು ಸೋಮವಾರ ತಾತ್ವಿಕ ಒಪ್ಪಿಗೆ ನೀಡಿದೆ.
ಹೋಟೆಲ್ ವಹಿವಾಟು ಈಚಿನ ವರ್ಷಗಳಲ್ಲಿ ಬೆಳವಣಿಗೆ ಕಂಡಿದೆ. ಹೀಗಾಗಿ ಅದು ತನ್ನದೇ ಆದ ಹಾದಿಯನ್ನು ಕಂಡುಕೊಳ್ಳಲು ಸಿದ್ಧವಾಗಿದೆ ಎಂದು ಐಟಿಸಿ ಹೇಳಿದೆ.
ಐಟಿಸಿ ಹೋಟೆಲ್ಸ್ ಲಿಮಿಟೆಡ್ ಕಂಪನಿಯಲ್ಲಿ ಐಟಿಸಿ ಲಿಮಿಟೆಡ್ ಶೇಕಡ 40ರಷ್ಟು ಷೇರುಗಳನ್ನು ಹೊಂದಿರಲಿದೆ. ಇನ್ನುಳಿದ ಷೇರುಗಳು, ಐಟಿಸಿಯ ಷೇರುದಾರರ ಪಾಲಿಗೆ ಬರಲಿವೆ. 1975ರಲ್ಲಿ ಆರಂಭವಾದ ಐಟಿಸಿ ಹೋಟೆಲ್ಸ್, ಈಗ 120 ಹೋಟೆಲ್‌ಗಳನ್ನು ಹೊಂದಿದೆ.
‘ಹೋಟೆಲ್ ವಹಿವಾಟು ಪ್ರತ್ಯೇಕಗೊಳ್ಳುತ್ತಿರುವುದು ಬಹಳ ಮಹತ್ವದ್ದು. ಇದರಿಂದಾಗಿ ಐಟಿಸಿಯ ಬಂಡವಾಳದ ಮೇಲಿನ ವರಮಾನವು ಹೆಚ್ಚಾಗಲಿದೆ’ ಎಂದು ಐಐಎಫ್‌ಎಲ್ ಸಂಸ್ಥೆಯ ವಿಶ್ಲೇಷಕ ನೇಮಕುಮಾರ್ ಹೇಳಿದ್ದಾರೆ. ವಹಿವಾಟು ಪ್ರತ್ಯೇಕಿಸುವ ಪ್ರಕ್ರಿಯೆಯು ಒಂಬತ್ತರಿಂದ ಹನ್ನೆರಡು ತಿಂಗಳಲ್ಲಿ ಪೂರ್ಣವಾಗಬಹುದು. ಐಟಿಸಿಯಲ್ಲಿ 100 ಷೇರು ಹೊಂದಿದ್ದರೆ, ಐಟಿಸಿ ಹೋಟೆಲ್ಸ್‌ನ 60 ಷೇರುಗಳು ಸಿಗಬಹುದು ಎಂದು ಅವರು ಅಂದಾಜಿಸಿದರು.
‘ಐಟಿಸಿ ಲಿಮಿಟೆಡ್‌ನ ಹೋಟೆಲ್ ವಹಿವಾಟಿಗೆ ಹೆಚ್ಚಿನ ಬಂಡವಾಳದ ಅಗತ್ಯವಿದೆ. ಆದರೆ, ಆ ವಹಿವಾಟಿನಿಂದ ಕಂಪನಿಯ ಒಟ್ಟು ವರಮಾನಕ್ಕೆ ಸಿಗುವ ಪಾಲು ಶೇ 5ಕ್ಕಿಂತ ಕಡಿಮೆ. ಹೋಟೆಲ್ ವಹಿವಾಟನ್ನು ಪ್ರತ್ಯೇಕ ಮಾಡುವುದು ಸ್ವಾಗತಾರ್ಹ ನಡೆ. ಇದು ಕಂಪನಿಯ ಷೇರುದಾರರಿಗೆ ಒಳ್ಳೆಯದನ್ನು ಮಾಡಲಿದೆ’ ಎಂದು ಸ್ಯಾಮ್ಕೊ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥೆ ಅಪೂರ್ವಾ ಶೇಠ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.