ನವದೆಹಲಿ/ಮುಂಬೈ: ಜೆಟ್ ಏರ್‌ವೇಸ್ ಕಂಪನಿಯು ಕೆಲವು ಸಿಬ್ಬಂದಿಯ ವೇತನ ಕಡಿತ ಮಾಡಲಿದೆ, ಹಲವು ನೌಕರರಿಗೆ ವೇತನ ರಹಿತ ರಜೆ ನೀಡಲಿದೆ.
ಈ ಕ್ರಮಗಳು ಡಿಸೆಂಬರ್ 1ರಿಂದ ಜಾರಿಗೆ ಬರಲಿವೆ. ಕಂಪನಿಯನ್ನು ಬಿಡ್ ಮೂಲಕ ತನ್ನದಾಗಿಸಿಕೊಂಡಿರುವ ಜಲನ್–ಕಲ್‌ರಾಕ್ ಒಕ್ಕೂಟವು (ಜೆಕೆಸಿ) ‘ಅಲ್ಪಾವಧಿಯಲ್ಲಿ ಕಠಿಣ ತೀರ್ಮಾನಗಳನ್ನು ಕೈಗೊಳ್ಳಬೇಕಾಗಬಹುದು’ ಎಂದು ಹೇಳಿದ ಕೆಲವೇ ತಾಸುಗಳಲ್ಲಿ ಈ ತೀರ್ಮಾನ ಹೊರಬಿದ್ದಿದೆ.
ಜೆಟ್ ಏರ್‌ವೇಸ್ ಕಂಪನಿಯು 2019ರಲ್ಲಿ ವಿಮಾನಯಾನ ಸೇವೆ ಸ್ಥಗಿತಗೊಳಿಸಿತ್ತು. ಕಂಪನಿಯು ಇನ್ನೂ ತನ್ನ ಸೇವೆಗಳನ್ನು ಪುನರಾರಂಭ ಮಾಡಿಲ್ಲ.
ವೇತನ ಕಡಿತವು ಒಟ್ಟು ವೇತನದ ಶೇ 50ರವರೆಗೆ ಇರಲಿದೆ. ಸಿಇಒ ಮತ್ತು ಸಿಎಫ್‌ಒ ಹುದ್ದೆಯಲ್ಲಿರುವವ ವೇತನ ಕಡಿತ ಗರಿಷ್ಠ ಪ್ರಮಾಣದಲ್ಲಿರಲಿದೆ.
ಕಂಪನಿಯ ಮೂರನೆಯ ಒಂದರಷ್ಟು ನೌಕರರಿಗೆ ವೇತನ ಕಡಿತ ಅನ್ವಯವಾಗಲಿದೆ. ಕಂಪನಿಯ ಶೇ 10ಕ್ಕಿಂತ ಕಡಿಮೆ ಪ್ರಮಾಣದ ನೌಕರರನ್ನು ವೇತನ ರಹಿತ ರಜೆ ಮೇಲೆ ಕಳುಹಿಸಲಾಗುತ್ತದೆ ಎಂದು ಸಿಇಒ ಸಂಜೀವ್ ಕಪೂರ್ ತಿಳಿಸಿದ್ದಾರೆ.
‘ಮಾಲೀಕತ್ವದ ಹಸ್ತಾಂತರ ಪ್ರಕ್ರಿಯೆಯು ವಿಳಂಬವಾಗುತ್ತಿದೆ. ಹೀಗಾಗಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಯಿತು’ ಎಂದು ಅವರು ಹೇಳಿದ್ದಾರೆ. ಕಂಪನಿಯಲ್ಲಿ ಅಂದಾಜು 250 ಸಿಬ್ಬಂದಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.