ADVERTISEMENT

ಜಿಯೊ All-in-One Plan; ₹129ಕ್ಕೆ ಅಗ್ಗದ ಪ್ಲಾನ್,₹199ರಿಂದ ಅನಿಯಮಿತ ಪ್ಯಾಕ್

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 13:36 IST
Last Updated 9 ಡಿಸೆಂಬರ್ 2019, 13:36 IST
ಜಿಯೊ ಹೊಸ ಪ್ರೀಪೇಯ್ಡ್‌ ಪ್ಲಾನ್‌ಗಳು
ಜಿಯೊ ಹೊಸ ಪ್ರೀಪೇಯ್ಡ್‌ ಪ್ಲಾನ್‌ಗಳು    

ಬೆಂಗಳೂರು:ಶುಕ್ರವಾರದಿಂದ ರಿಲಯನ್ಸ್‌ ಜಿಯೊ ಹೊಸ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನ್‌ಗಳನ್ನು ಹೊರತಂದಿದೆ. ಗ್ರಾಹಕರು ಹಿಂದಿಗಿಂತ ಹೆಚ್ಚುವರಿ ಸೇವಾ ದರ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ, ಅದಕ್ಕೆ ಶೇ 300ರಷ್ಟು ಹೆಚ್ಚುವರಿ ಲಾಭ ಪಡೆಯಬಹುದಾಗಿ ಎಂದು ಕಂಪನಿ ಹೇಳಿದೆ. ₹ 199ರಿಂದ ಜಿಯೊದ ಆಲ್‌–ಇನ್‌–ಪ್ಲಾನ್‌ ಲಭ್ಯವಿದೆ.

ನಷ್ಟದಿಂದ ಹೊರಬರುವ ನಿಟ್ಟಿನಲ್ಲಿ ದೂರಸಂಪರ್ಕ ಸೇವಾದಾರ ಕಂಪನಿಗಳಾ ಏರ್‌ಟೆಲ್‌ ಮತ್ತು ವೊಡಾಫೋನ್‌ ಇಂಡಿಯಾ ಇತ್ತೀಚೆಗೆ ಕರೆ ಮತ್ತು ಡೇಟಾ ಸೇವೆಗಳಿಗೆ ದರ ಹೆಚ್ಚಳ ಪ್ರಕಟಿಸಿದವು. ಅದರ ಬೆನ್ನಲೇ ಜಿಯೊ ಸಹ ಶೇ 40ರ ವರೆಗೂ ದರ ಹೆಚ್ಚಳದೊಂದಿಗೆ ಹೊಸ ಆನ್–ಇನ್–ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. ₹ 199 ರಿಂದ ₹ 2,199ರ ವರೆಗೂ ರೀಚಾರ್ಜ್‌ ಆಯ್ಕೆಗಳಿವೆ. ಹೈಸ್ಪೀಡ್‌ ಡೇಟಾ, ಜಿಯೊದಿಂದ ಜಿಯೊಗೆ ಉಚಿತ ಕರೆ ಸೌಲಭ್ಯಗಳು ಮುಂದುವರಿದಿವೆ.

* 28 ದಿನಗಳ ಹೊಸ ಅನಿಯಮಿತ ಪ್ಯಾಕ್‌

ADVERTISEMENT

₹ 199ರ ಆನ್‌–ಇನ್‌–ಒನ್‌ ಪ್ರೀಪೇಯ್ಡ್‌ ಪ್ಲಾನ್‌ನಲ್ಲಿ ನಿತ್ಯ 1.5 ಜಿಬಿ ಡೇಟಾ ಸಿಗಲಿದೆ. ಜಿಯೊದಿಂದ ಜಿಯೊ ಸಂಖ್ಯೆಗಳಿಗೆ ಅನಿಯಮಿತ ಕರೆ ಹಾಗೂ ಜಿಯೊದಿಂದ ಇತರೆ ನೆಟ್‌ವರ್ಕ್‌ಗಳಿಗೆ 1000 ನಿಮಿಷಗಳ ವಾಯ್ಸ್‌ ಕಾಲಿಂಗ್‌ ಸೌಲಭ್ಯವು 28 ದಿನಗಳವರೆಗೂ ಸಿಗಲಿದೆ. ₹ 249 ಪ್ರೀಪೇಯ್ಡ್‌ ಪ್ಲಾನ್‌ನಲ್ಲಿ ನಿತ್ಯ 2 ಜಿಬಿ ಹೈ–ಸ್ಪೀಡ್‌ ಡೇಟಾ, ಉಚಿತ ಜಿಯೊದಿಂದ ಜಿಯೊ ಕರೆಗಳು ಹಾಗೂ 1000 ನಿಮಿಷಗಳ ಬಾಹ್ಯ ನೆಟ್‌ವರ್ಕ್ ಕರೆಗಳಿಗೆ ಅವಕಾಶವಿದೆ. 28 ದಿನಗಳಿಗೆ ₹ 349 ರಿಚಾರ್ಜ್‌ ಆಯ್ಕೆ ಸಹ ಇದ್ದು, ಈ ಪ್ಲಾನ್‌ನಲ್ಲಿ ನಿತ್ಯ 3 ಜಿಬಿ ಡೇಟಾ ಸಿಗಲಿದೆ. ಉಳಿದ ಸೌಲಭ್ಯಗಳಲ್ಲಿ ಬದಲಾವಣೆ ಇರುವುದಿಲ್ಲ.

* ಅಗ್ಗದ ಹೊಸ ಪ್ರೀಪೇಯ್ಡ್‌ ಆಯ್ಕೆಗಳು

ಹೆಚ್ಚು ಡೇಟಾ ಬಳಸದವರಿಗಾಗಿಯೇ ಅಗ್ಗದ ಹೊಸ ಪ್ಲಾನ್‌ಗಳನ್ನು ಜಿಯೊ ಪರಿಚಯಿಸಿದೆ. ₹ 129ಕ್ಕೆ28 ದಿನಗಳ ವ್ಯಾಲಿಡಿಟಿ ಪ್ಲಾನ್‌ ಬಿಡುಗಡೆಯಾಗಿದ್ದು, ಒಟ್ಟು 2 ಜಿಬಿ ಡೇಟಾ, ಜಿಯೊದಿಂದ ಜಿಯೊಗೆ ಅನಿಯಮಿತ ಕರೆಗಳು, ಇತರೆ ನೆಟ್‌ವರ್ಕ್‌ಗಳಿಗೆ 1,000 ನಿಮಿಷ ಕರೆ ಸೌಲಭ್ಯ ನೀಡಲಾಗಿದೆ. ₹329 ಆಯ್ಕೆಯೂ ಇದ್ದು, ಈ ಪ್ಲಾನ್‌ 84 ದಿನಗಳ ವರೆಗೆ ವ್ಯಾಲಿಡಿಟಿ ಹೊಂದಿರಲಿದೆ. ಜಿಯೊ ಹೊರತಾದ ಸಂಖ್ಯೆಗಳಿಗೆ 3,000 ನಿಮಿಷಗಳ ಕರೆ, ಜಿಯೊದಿಂದ ಜಿಯೊಗೆ ಅನಿಯಮಿತ ಕರೆ ಹಾಗೂ ಒಟ್ಟು 6 ಜಿಬಿ ಡೇಟಾ ಸೇವೆ ಸಿಗಲಿದೆ.

ಅಗ್ಗದ ಪ್ಲಾನ್‌ನಲ್ಲಿ ₹ 1,299ಕ್ಕೆ 365 ದಿನಗಳ ವ್ಯಾಲಿಡಿಟಿ ನೀಡುವ ಮೂಲಕ ಜಿಯೊ ಮತ್ತೆ ಮಧ್ಯಮ ವರ್ಗದ ಗ್ರಾಹಕರ ಗಮನ ಸೆಳೆದಿದೆ. ಈ ಪ್ಲಾನ್‌ನಲ್ಲೂ ಜಿಯೊದಿಂದ ಜಿಯೊ ಸಂಖ್ಯೆಗೆ ಅನಿಯಮಿತ ಕರೆ, ಜಿಯೊ ಹೊರತಾದ ನೆಟ್‌ವರ್ಕ್‌ಗಳಿಗೆ 12,000 ನಿಮಿಷಗಳ ಕರೆ ಹಾಗೂ ಒಟ್ಟು 24 ಜಿಬಿ ಡೇಟಾ ಸಿಗಲಿದೆ.

* 56ದಿನಗಳ ಹೊಸ ಅನಿಯಮಿತ ಪ್ಯಾಕ್‌

28 ದಿನಗಳಿಗೂ ಹೆಚ್ಚಿನ ವ್ಯಾಲಿಡಿಟಿ ಬಯಸುವವರಿಗಾಗಿ 56 ದಿನಗಳ ಪ್ಲಾನ್‌ಗಳಿದ್ದು, ₹ 399 ಮತ್ತು ₹ 444 ಆಯ್ಕೆಗಳನ್ನು ನೀಡಲಾಗಿದೆ. ₹ 399 ಪ್ಲಾನ್‌ನಲ್ಲಿ ಗ್ರಾಹಕರು ನಿತ್ಯ 1.5 ಜಿಬಿ ಹೈ–ಸ್ಪೀಡ್‌ ಡಾಟಾ ಹಾಗೂ ₹ 444 ಪ್ಲಾನ್ ಆಯ್ಕೆ ಮಾಡಿಕೊಂಡವರು ನಿತ್ಯ 2 ಜಿಬಿ ಹೈ–ಸ್ಪೀಡ್‌ ಡಾಟಾ ಪಡೆಯಬಹುದು. ಉಳಿದಂತೆ ಎರಡೂ ಪ್ಲಾನ್‌ಗಳಲ್ಲಿ ಜಿಯೊದಿಂದ ಜಿಯೊ ಸಂಖ್ಯೆಗಳಿಗೆ ಅನಿಯಮಿತ ಕರೆಗಳು, ಇತರೆ ನೆಟ್‌ವರ್ಕ್‌ಗಳಿಗೆ 2,000 ನಿಮಿಷಗಳ ಕರೆ ಸೌಲಭ್ಯವಿದೆ. ಈ ಹಿಂದೆ ₹ 444ರ ರಿಚಾರ್ಜ್‌ಗೆ 84 ದಿನಗಳ ವ್ಯಾಲಿಡಿಟಿ ನೀಡಲಾಗಿತ್ತು.

* 84ದಿನಗಳ ಹೊಸ ಅನಿಯಮಿತ ಪ್ಯಾಕ್‌

ಆನ್‌–ಇನ್‌–ಒನ್‌ 84 ದಿನಗಳ ಪ್ಲಾನ್‌ಗಳ ದರದಲ್ಲಿ ಹೆಚ್ಚಳವಾಗಿದ್ದು, ₹ 555 ನಿಗದಿಯಾಗಿದೆ. ಈ ಪ್ಲಾನ್‌ನಲ್ಲಿ 84 ದಿನಗಳ ವರೆಗೂ ನಿತ್ಯ 1.5 ಜಿಬಿ ಹೈ–ಸ್ಪೀಡ್‌ ಡೇಟಾ, ಜಿಯೊದಿಂದ ಜಿಯೊಗೆ ಅನಿಯಮಿತ ಕರೆಗಳು, ಇತರೆ ನೆಟ್‌ವರ್ಕ್‌ಗಳಿಗೆ 3,000 ನಿಮಿಷಗಳ ಕರೆ ಸೌಲಭ್ಯ ನೀಡಲಾಗಿದೆ. ಜಿಯೊ ₹ 599 ಪ್ಲಾನ್‌ ಕೂಡ ಬಿಡುಗಡೆ ಮಾಡಿದ್ದು, ಇದರಲ್ಲಿ ನಿತ್ಯ 2 ಜಿಬಿ ಹೈ–ಸ್ಪೀಡ್‌ ಡೇಟಾ ಸಿಗಲಿದೆ. ಉಳಿದಂತೆ₹ 555ರ ಸೌಲಭ್ಯಗಳು ಈ ಪ್ಲಾನ್‌ನಲ್ಲೂ ಅನ್ವಯವಾಗುತ್ತವೆ.

* ಇಡೀ ವರ್ಷಕ್ಕೆ ಒಂದೇ ಪ್ಲಾನ್‌

ಆಗಾಗ್ಗೆ ರಿಚಾರ್ಜ್ ಮಾಡಿಸುವ ಬದಲು ಒಮ್ಮೆಗೆ ಅವಶ್ಯವಿರುವ ಪ್ಲಾನ್‌ ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇದೆ. ₹ 2,199ಕ್ಕೆ ರಿಚಾರ್ಜ್ ಮಾಡಿಸಿ 365 ದಿನಗಳ ವರೆಗೂ ನಿರಂತರ ಸೇವೆ ಪಡೆಯಬಹುದಾಗಿದೆ. ಇದರಲ್ಲಿ ನಿತ್ಯ 1.5 ಜಿಬಿ ಹೈಸ್ಪೀಡ್‌ ಡೇಟಾ, ಜಿಯೊದಿಂದ ಜಿಯೊಗೆ ಅನಿಯಮಿತ ಕರೆ ಹಾಗೂ ಜಿಯೊ ಹೊರತಾದ ಸಂಖ್ಯೆಗಳಿಗೆ 12,000 ನಿಮಿಷಗಳ ಕರೆ ಸೌಲಭ್ಯ ನೀಡಲಾಗಿದೆ.

ಎಲ್ಲ ಪ್ಲಾನ್‌ಗಳಲ್ಲಿಯೂ ನಿತ್ಯ 100 ಎಸ್‌ಎಂಎಸ್‌ ಲಭ್ಯವಿರಲಿದೆ. ಇತರೆ ನೆಟ್‌ವರ್ಕ್‌ಗಳಿಗೆ ಹೆಚ್ಚು ಕರೆ ಮಾಡುವವರಿಗಾಗಿ ಟಾಪ್‌ ಅಪ್‌ ರಿಚಾರ್ಜ್ ಆಯ್ಕೆಯೂ ಇದೆ.

ಕಳೆದ ತ್ರೈಮಾಸಿಕದಲ್ಲಿ ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಒಟ್ಟು ₹ 74,000 ಕೋಟಿ ನಷ್ಟ ಹೊಂದಿರುವುದಾಗಿ ಪ್ರಕಟಿಸಿದ್ದವು. ರಿಲಯನ್ಸ್‌ ಮುಖ್ಯಸ್ಥ ಮುಖೇಶ್‌ ಅಂಬಾನಿ ಲಾಭಾಂಶ ₹ 990 ಕೋಟಿಗೆ ಹೆಚ್ಚಿದೆ ಎಂದು ಪ್ರಕಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.