ಬೆಂಗಳೂರು: ಮಾಲ್‌ಗಳಲ್ಲಿ ವ್ಯಾಪಾರ ಚಟುವಟಿಕೆ ಸ್ಥಗಿತಗೊಂಡಿರುವ ಕಾರಣ ರಾಜ್ಯದಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಒಟ್ಟು ಒಂದು ಲಕ್ಷ ಉದ್ಯೋಗ ನಷ್ಟವಾಗಿದೆ ಎಂದು ಭಾರತೀಯ ಶಾಪಿಂಗ್ ಸೆಂಟರ್‌ಗಳ ಒಕ್ಕೂಟ (ಎಸ್‌ಸಿಎಐ) ಹೇಳಿದೆ.
ಶುಕ್ರವಾರ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಮುಕೇಶ್ ಕುಮಾರ್, ‘ರಾಜ್ಯದಲ್ಲಿ ಮಾಲ್‌ಗಳ ಬಾಗಿಲು ಮುಚ್ಚಿರುವುದರ ಪರಿಣಾಮವಾಗಿ ಸರ್ಕಾರಕ್ಕೆ ಪ್ರತಿ ತಿಂಗಳು ₹ 360 ಕೋಟಿ ಆದಾಯ ನಷ್ಟವಾಗುತ್ತಿದೆ’ ಎಂದು ತಿಳಿಸಿದರು.
ರಾಜ್ಯದ ಶೇಕಡ 50ಕ್ಕಿಂತ ಹೆಚ್ಚಿನ ಮಾಲ್‌ಗಳು ಸ್ಥಗಿತಗೊಳ್ಳುವ ಭೀತಿ ಎದುರಿಸುತ್ತಿವೆ. ಸರ್ಕಾರದ ಕಟ್ಟಡಗಳಲ್ಲಿ ಇರುವ ಮಾಲ್‌ಗಳ ಬಾಡಿಗೆ ಮನ್ನಾ ಮಾಡಬೇಕು, 2022ರ ಜನವರಿವರೆಗೆ ಆಸ್ತಿ ತೆರಿಗೆ ಹಾಗೂ ನಿಗದಿತ ವಿದ್ಯುತ್ ಶುಲ್ಕ ಪಾವತಿಗೆ ವಿನಾಯಿತಿ ಕೊಡಬೇಕು ಮುಕೇಶ್ ಅವರು ಮನವಿ ಮಾಡಿದರು. ಮೊದಲ ಹಂತದ ಅನ್‌ಲಾಕ್ ಪ್ರಕ್ರಿಯೆಯಲ್ಲಿಯೇ ಮಾಲ್‌ಗಳಿಗೂ ತೆರೆಯಲು ಅವಕಾಶ ಕಲ್ಪಿಸಬೇಕು ಎಂದು ಕೂಡ ಅವರು ಸರ್ಕಾರನ್ನು ಕೋರಿದರು.
ದೇಶದಲ್ಲಿ ಮಾಲ್‌ಗಳು, ಅಲ್ಲಿನ ಮಳಿಗೆಗಳು ಬಹಳ ಸಂಕಷ್ಟದಲ್ಲಿವೆ. ಹಿಂದಿನ ವರ್ಷದ ಲಾಕ್‌ಡೌನ್ ಸಂದರ್ಭದಲ್ಲಿ ಸಾಲದ ಕಂತುಗಳ ಮರುಪಾವತಿಗೆ ವಿನಾಯಿತಿ ಸಿಕ್ಕಿತ್ತು. ಆದರೆ, ಈ ಬಾರಿ ಅಂತಹ ಸೌಲಭ್ಯ ಇಲ್ಲ. ಈಗ ಮಾಲ್‌ಗಳಿಗೆ, ಮಳಿಗೆಗಳಿಗೆ ಆದಾಯವೇ ಇಲ್ಲದಂತೆ ಆಗಿದೆ ಎಂದು ಅವರು ಹೇಳಿದರು.
ಮಾಲ್‌ಗಳು ಸುರಕ್ಷಿತವಾಗಿವೆ, ಅಲ್ಲಿ ಸ್ಯಾನಿಟೈಸ್ ಮಾಡಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಮಾಲ್‌ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದ್ದು, ಅಲ್ಲಿಗೆ ಬರುತ್ತಿರುವ ಗ್ರಾಹಕರು ಹೆಚ್ಚು ಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಒಕ್ಕೂಟ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.