ADVERTISEMENT

ಕನ್ನಡಿಗರಿಗೆ ಉದ್ಯೋಗ ಮೀಸಲು: ನಿರ್ಧಾರ ಮರುಪರಿಶೀಲನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 15:01 IST
Last Updated 17 ಜುಲೈ 2024, 15:01 IST
ರಮೇಶ್‌ ಚಂದ್ರ ಲಹೋಟಿ
ರಮೇಶ್‌ ಚಂದ್ರ ಲಹೋಟಿ   

ಬೆಂಗಳೂರು: ‘ಖಾಸಗಿ ಕಂಪನಿಗಳು ಮತ್ತು ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ನಿರ್ಧಾರವನ್ನು ರಾಜ್ಯ ಸರ್ಕಾರವು ಮರು ಪರಿಶೀಲಿಸಬೇಕಿದೆ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಒತ್ತಾಯಿಸಿದೆ.

‌‌‌ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸುವ ಸರ್ಕಾರದ ತೀರ್ಮಾನವು ಸ್ವಾಗತಾರ್ಹವಾಗಿದೆ. ವಾಣಿಜ್ಯ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಬಗ್ಗೆ ಉತ್ತೇಜಿಸಲು ಮಹಾಸಂಸ್ಥೆಯು ಸಿದ್ಧವಾಗಿದೆ. ಆದರೆ, ಕರಡು ಮಸೂದೆಯಲ್ಲಿ ಕೆಲವು ಅಂಶಗಳನ್ನು ಬದಲಾವಣೆ ಮಾಡಬೇಕಿದೆ ಎಂದು ಅಧ್ಯಕ್ಷ ರಮೇಶ್‌ ಚಂದ್ರ ಲಹೋಟಿ ಹೇಳಿದ್ದಾರೆ.

ಕರ್ನಾಟಕವು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರು ಪ್ರಮುಖ ಸ್ಥಾನ ಪಡೆದಿದೆ. ಹಾಗಾಗಿ, ತಾಂತ್ರಿಕ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸಲು ಮತ್ತು ರಾಷ್ಟ್ರಮಟ್ಟದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯವು ಅಗ್ರಸ್ಥಾನ ಪಡೆದುಕೊಳ್ಳಲು ಕೌಶಲ ಹೊಂದಿದ ಪ್ರತಿಭಾವಂತರ ಅಗತ್ಯವಿದೆ ಎಂದು ಹೇಳಿದ್ದಾರೆ.

ADVERTISEMENT

ಅಲ್ಲದೆ, ‘ಸಿ’ ಮತ್ತು ‘ಡಿ’ ಹುದ್ದೆಗಳ ನೇಮಕದಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡಲು ನಿರ್ಧರಿಸುವುದು ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.

ಕನ್ನಡಿಗರಿಗೆ ಮ್ಯಾನೇಜ್‌ಮೆಂಟ್ ವರ್ಗದ ಉದ್ಯೋಗಗಳಲ್ಲಿ ಶೇ 25ರಷ್ಟು ಮೀಸಲಾತಿ ನೀಡುವ ಕುರಿತು ಮಸೂದೆಯಲ್ಲಿ ಸೇರಿಸಬೇಕು. ಇದರಿಂದ ಕೈಗಾರಿಕೆಗಳು ಮತ್ತು ಕನ್ನಡಿಗರ ಹಿತಾಸಕ್ತಿ ಕಾಪಾಡಲು ಅನುಕೂಲವಾಗಲಿದೆ ಎಂದಿದ್ದಾರೆ.

ಈ ಬಗ್ಗೆ ಪರಿಹಾರ ಕಂಡುಕೊಳ್ಳಲು ವಾಣಿಜ್ಯ, ಕೈಗಾರಿಕೆಗಳ ಸಂಘ–ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ಐ.ಟಿ ಕಂಪನಿಗಳ ಸಭೆ ಕರೆಯಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.