ನವದೆಹಲಿ: ಗ್ರಾಹಕ ಬಳಕೆ ವಸ್ತುಗಳ ತಂತ್ರಜ್ಞಾನ ಬ್ರ್ಯಾಂಡ್ 'ನಥಿಂಗ್'ನಲ್ಲಿ ಕ್ರಿಕೆಟಿಗ ಯುವರಾಜ್ ಸಿಂಗ್, ಸಿನಿಮಾ ನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ಹಲವು ಜನ ಹೂಡಿಕೆ ಮಾಡಿದ್ದಾರೆ. ಈಗಾಗಲೇ ದೇಶದಲ್ಲಿ ವೈರ್‌ಲೆಸ್ ಇಯರ್‌ಫೋನ್ ಬಿಡುಗಡೆ ಮಾಡಿರುವ ನಥಿಂಗ್, 50 ಮಿಲಿಯನ್ ಡಾಲರ್ (ಸುಮಾರು ₹376 ಕೋಟಿ) ಹೂಡಿಕೆ ಸಂಗ್ರಹಿಸಿರುವ ಕುರಿತು ಪ್ರಕಟಿಸಿತ್ತು.
ಕಾರ್ಯತಂತ್ರದ ಭಾಗವಾಗಿರುವವರು ಮತ್ತು ಖಾಸಗಿ ಹೂಡಿಕೆದಾರರಿಂದ 50 ಮಿಲಿಯನ್ ಡಾಲರ್ ಸಂಗ್ರಹ ಪೂರ್ಣಗೊಂಡಿರುವುದಾಗಿ ಅಕ್ಟೋಬರ್‌ನಲ್ಲಿ ನಥಿಂಗ್ ಪ್ರಕಟಿಸಿತ್ತು. ಭಾರತದಿಂದ ಸಿನಿಮಾ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್, ಅಂತರರಾಷ್ಟ್ರೀಯ ಕ್ರಿಕೆಟಿಗ, ಉದ್ಯಮಿ ಯುವರಾಜ್ ಸಿಂಗ್ ಹಾಗೂ ಫ್ಯಾಷನ್ ಡಿಸೈನರ್ ಸವ್ಯಸಾಚಿ ಮುಖರ್ಜಿ ಹೂಡಿಕೆ ಮಾಡಿರುವುದಾಗಿ ಪ್ರಕಟಣೆಯಲ್ಲಿದೆ.
ಡಿಜಿಟಲ್ ಕಂಟೆಂಟ್ ಕ್ರಿಯೇಟರ್, ಉದ್ಯಮಿ ರಣವೀರ್ ಅಲ್ಲಾಹ್‌ಬಾದಿಯಾ ಮತ್ತು ಬಾಲಿವುಡ್ ಸಂಗೀತ ಸಂಯೋಜಕ, ಗಾಯಕ ಜಸ್ಲೀನ್ ರಾಯಲ್ ಸಹ ನಥಿಂಗ್ ಜೊತೆ ಕೈಜೋಡಿಸಿದ್ದಾರೆ.
ಇದೇ ವರ್ಷ ನಥಿಂಗ್, ಇಯರ್(1) ಹೆಸರಿನ ವೈರ್‌ಲೆಸ್ ಇಯರ್‌ಬಡ್ ಬಿಡುಗಡೆ ಮಾಡಿತ್ತು. ಲಂಡನ್ ಮೂಲದ ನಥಿಂಗ್ ಕಂಪನಿಯಲ್ಲಿ ಭಾರತೀಯ ಉದ್ಯಮಿ ಕುನಾಲ್ ಶಾ ಪ್ರಮುಖ ಪಾತ್ರವಹಿಸಿದ್ದಾರೆ. ಒನ್‌ಪ್ಲಸ್ ಸಹ ಸಂಸ್ಥಾಪಕ ಕಾರ್ಲ್ ಪೈ ಅವರು ನಥಿಂಗ್‌ಗೂ ಸಹ ಸಂಸ್ಥಾಪಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.