ಬೆಂಗಳೂರು: ಕರ್ನಾಟಕ ರಾಜ್ಯವು 2019–19 ರಿಂದ 2022–23ರ ಅವಧಿಯಲ್ಲಿ ಒಟ್ಟು ₹7.60 ಲಕ್ಷ ಕೋಟಿ ಮೊತ್ತದ ಹೂಡಿಕೆಯನ್ನು ಆಕರ್ಷಿಸಿದೆ. ಇದರಲ್ಲಿ 2022–23ರಲ್ಲಿಯೇ ₹4.51 ಲಕ್ಷ ಕೋಟಿಯ ಮೊತ್ತದ ಹೂಡಿಕೆ ಪ್ರಸ್ತಾವ ಬಂದಿದೆ ಎಂದು ಎಂಎಸ್‌ಎಂಇ ರಫ್ತು ಉತ್ತೇಜನ ಮಂಡಳಿಯ ವರದಿ ತಿಳಿಸಿದೆ.
ಕರ್ನಾಟಕದಲ್ಲಿ 2018–19 ಮತ್ತು 2022–23ರಲ್ಲಿ ಹೂಡಿಕೆ, ಪ್ರಗತಿ ಮತ್ತು ಅಭಿವೃದ್ಧಿ ಎನ್ನುವ ವಿಷಯಗಳ ಮೇಲಿನ ಅಧ್ಯಯನ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ. ಆರ್ಗ್ಯಾನಿಕ್ ಫುಡ್ ಪ್ರೊಡ್ಯೂಸರ್ಸ್ ಆ್ಯಂಡ್ ಮಾರ್ಕೆಟಿಂಗ್ ಏಜೆನ್ಸಿಸ್ (ಸಿಒಐಐ) ಜೊತೆಗೂಡಿ ಈ ವರದಿ ಸಿದ್ಧಪಡಿಸಲಾಗಿದೆ.
ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಎಂಎಸ್‌ಎಂಇ ಇಪಿಸಿಯ ಅಧ್ಯಕ್ಷ ಡಿ.ಎಸ್. ರಾವತ್, ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಮಾಹಿತಿಯ ಪ್ರಕಾರ, 2022–23ರಲ್ಲಿ ₹4.51 ಲಕ್ಷ ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವ ಬಂದಿದೆ. ಅದರಲ್ಲಿ ₹39,664 ಕೋಟಿ ಮೊತ್ತದ ಯೋಜನೆಯನ್ನು ರಾಜ್ಯವು ಪೂರ್ಣಗೊಳಿಸಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 8.5 ಲಕ್ಷ ಎಂಎಸ್‌ಎಂಇಗಳು ಇದ್ದು, 60 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡುತ್ತಿವೆ. ಉದ್ಯಮಶೀಲತೆಯ ಕೌಶಲ, ಸಕಾಲಕ್ಕೆ ಕಡಿಮೆ ಬಡ್ಡಿಗೆ ಸಾಲ ಸೌಲಭ್ಯ, ತಂತ್ರಜ್ಞಾನ ಅಳವಡಿಕೆ, ಗುಣಮಟ್ಟದ ಉತ್ಪಾದನೆ ಮತ್ತು ಸ್ಪರ್ಧಾತ್ಮಕತೆಗೆ ಬೆಂಬಲ ನೀಡುವ ಅಗತ್ಯ ಇದೆ ಎಂದು ವರದಿಯು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.