ಮಂಗಳೂರು: 2024–25ನೇ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕರ್ಣಾಟಕ ಬ್ಯಾಂಕ್ ₹336.07 ಕೋಟಿ ನಿವ್ವಳ ಲಾಭ ದಾಖಲಿಸಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ₹330.26 ಕೋಟಿ ಲಾಭ ಗಳಿಸಿತ್ತು.
ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ₹736.40 ಕೋಟಿ ನಿವ್ವಳ ಲಾಭ ದಾಖಲಿಸಿದಂತಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಶೇ 5.06ರಷ್ಟು ಏರಿಕೆ ದಾಖಲಾಗಿದೆ.
ಬುಧವಾರ ಮಂಗಳೂರಿನಲ್ಲಿ ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ಎರಡನೇ ತ್ರೈಮಾಸಿಕ ಹಾಗೂ ಅರ್ಧ ವಾರ್ಷಿಕ ಆರ್ಥಿಕ ಫಲಿತಾಂಶಗಳಿಗೆ ಅನುಮೋದನೆ ನೀಡಲಾಯಿತು.
ಬ್ಯಾಂಕ್‌ನ ನಿವ್ವಳ ಅನುತ್ಪಾದಕ ಆಸ್ತಿ ಮೌಲ್ಯವು ಶೇ 1.46ಕ್ಕೆ ಇಳಿಕೆಯಾಗಿದೆ. ಎರಡನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಒಟ್ಟಾರೆ ವಹಿವಾಟು ಪ್ರಮಾಣವು ಶೇ 12.03ರಷ್ಟು ವೃದ್ಧಿಯಾಗಿದ್ದು, ₹1.75 ಲಕ್ಷ ಕೋಟಿಗೆ ತಲುಪಿದೆ. ಠೇವಣಿ ಪ್ರಮಾಣವು ಶೇ 11.66ರಷ್ಟು ಏರಿಕೆ ಕಂಡಿದ್ದು, ₹99,967 ಕೋಟಿಗೆ ತಲುಪಿದೆ. ಮುಂಗಡ ನೀಡಿಕೆ ಪ್ರಮಾಣದಲ್ಲೂ ಶೇ 12.52ರಷ್ಟು ಏರಿಕೆಯಾಗಿದ್ದು, ₹75,316 ಕೋಟಿ ಆಗಿದೆ.
‘ಎರಡನೇ ತ್ರೈಮಾಸಿಕದಲ್ಲಿ ನಾವು ಸುಸ್ಥಿರ ಅಭಿವೃದ್ಧಿ ದಾಖಲಿಸಿದ್ದೇವೆ. ಹೊಸ ಹಾದಿಯ ನಮ್ಮ ಪ್ರಯಾಣವು ಉತ್ತಮ ಫಲಿತಾಂಶ ನೀಡುತ್ತಿದ್ದು, ಪ್ರಸಕ್ತ ಆರ್ಥಿಕ ವರ್ಷಕ್ಕೆ ನಿಗದಿಪಡಿಸಿರುವ ಗುರಿಯನ್ನು ತಲುಪುವ ವಿಶ್ವಾಸ ಮೂಡಿದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀಕೃಷ್ಣನ್ ಎಚ್. ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.