ADVERTISEMENT

‘ಭಾರತ್‌ ಕಾ ಕರ್ಣಾಟಕ ಬ್ಯಾಂಕ್‌’: ಗ್ರಾಹಕರ ನಂಬಿಕೆಯೇ ಜೀವಾಳ

ಪರಂಪರೆ ಸಾರಲು ‘ಭಾರತ್‌ ಕಾ ಕರ್ಣಾಟಕ ಬ್ಯಾಂಕ್‌’ ಅಭಿಯಾನ ಆರಂಭ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 15:33 IST
Last Updated 17 ಫೆಬ್ರುವರಿ 2024, 15:33 IST
ಕರ್ಣಾಟಕ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಶೇಖರ್‌ ರಾವ್‌
ಕರ್ಣಾಟಕ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಶೇಖರ್‌ ರಾವ್‌   

ಬೆಂಗಳೂರು: ‘ಕರ್ಣಾಟಕ ಬ್ಯಾಂಕ್‌ ಶತಮಾನೋತ್ಸವದ ಸಂಭ್ರಮದಲ್ಲಿದೆ. ಇದರ ಅಂಗವಾಗಿ ಆರಂಭಿಸಿರುವ ‘ಭಾರತ್‌ ಕಾ ಕರ್ಣಾಟಕ ಬ್ಯಾಂಕ್‌’ ಅಭಿಯಾನವು ನೂರು ವರ್ಷಗಳ ನಂಬಿಕೆ, ಶ್ರೇಷ್ಠತೆ ಹಾಗೂ ರಾಷ್ಟ್ರ ಸೇವೆಯ ಬದ್ಧತೆಗೆ ಕನ್ನಡಿ ಹಿಡಿಯಲಿದೆ’ ಎಂದು ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಶೇಖರ್‌ ರಾವ್‌ ಹೇಳಿದ್ದಾರೆ.

‘ಬ್ಯಾಂಕ್‌ನ ಪರಂಪರೆಯನ್ನು ಗುರುತಿಸುವಿಕೆ ಹಾಗೂ ಅದರ ಮಹತ್ವ ಸಾರುವುದೇ ಈ ಅಭಿಯಾನದ ಉದ್ದೇಶ. ರಾಜ್ಯದಲ್ಲಷ್ಟೇ ತನ್ನ ಈ ವಿಶಿಷ್ಟ ಪರಂಪರೆಯನ್ನು ಪಸರಿಸುತ್ತಿಲ್ಲ. ರಾಷ್ಟ್ರಮಟ್ಟಕ್ಕೂ ಇದನ್ನು ವಿಸ್ತರಿಸಿದೆ. ಬ್ಯಾಂಕ್‌ನ ಬ್ರ್ಯಾಂಡ್‌ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸಲು ಅಭಿಯಾನ ನೆರವಾಗಲಿದೆ’ ಎಂದು ಇ–ಮೇಲ್‌ ಮೂಲಕ ‘ಪ್ರಜಾವಾಣಿ’ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.

‘ಗ್ರಾಹಕರು ಮತ್ತು ಬ್ಯಾಂಕ್‌ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಆಶಯ ಹೊಂದಲಾಗಿದೆ. ಜೊತೆಗೆ, ಅವರನ್ನು ಬ್ಯಾಂಕ್‌ನ ಭಾಗವಾಗಿ ಪರಿಗಣಿಸುವ‌ ಗುರಿಯನ್ನೂ ಹೊಂದಲಾಗಿದೆ’ ಎಂದು ವಿವರಿಸುತ್ತಾರೆ.

ADVERTISEMENT

ಬ್ಯಾಂಕ್‌ನಲ್ಲಿ ಕಾರ್ಪೊರೇಟ್‌ ವಲಯದ ಉದ್ಯೋಗಿಗಳ ಉಳಿತಾಯ ಖಾತೆ ತೆರೆಯುವುದು, ಮನೆ ಬಾಗಿಲಿಗೆ ಚಿನ್ನದ ಸಾಲ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಲಕ್ಷಾಂತರ ಗ್ರಾಹಕರ ಪಾಲುದಾರರಾಗಿರುವುದು ಹೆಮ್ಮೆಯ ಸಂಗತಿ ಎನ್ನುತ್ತಾರೆ ಅವರು.

ಅಪಾಯ ನಿರ್ವಹಣೆಗೆ ಕ್ರಮ:

ಸಾಲ, ಮಾರುಕಟ್ಟೆ, ವಹಿವಾಟು, ಭದ್ರತೆ ಮತ್ತು ಕಾರ್ಯಾಚರಣೆಯ ಅಪಾಯ ತಡೆಗಟ್ಟುವ ಸಂಬಂಧ ಕಾಲಕಾಲಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ ರೂಪಿಸಿರುವ ಮಾರ್ಗಸೂಚಿಗಳನ್ನು ಬ್ಯಾಂಕ್‌ ಪಾಲಿಸುತ್ತಿದೆ. ಪೂರ್ವಭಾವಿಯಾಗಿ ಅಪಾಯದ ಮಟ್ಟವನ್ನು ಅರಿತು ಸಮರ್ಪಕವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕಾಗಿಯೇ ತಂತ್ರಾಂಶಗಳನ್ನು ಅಳವಡಿಸಿದ್ದೇವೆ ಎನ್ನುತ್ತಾರೆ ಅವರು.

ಗುಣಮಟ್ಟದ ನಿರ್ವಹಣೆಗಾಗಿ (ಐಎಸ್‌ಒ9001;2015) ಪ್ರಮಾಣ ಪತ್ರ ಪಡೆದಿದೆ. ಅಪಾಯ ತಡೆಗಟ್ಟುವ ಸಂಬಂಧ ಬ್ಯಾಂಕ್‌ನ ವ್ಯವಹಾರಗಳು ಮತ್ತು ಕಾರ್ಯಾಚರಣೆ ಘಟಕಗಳಲ್ಲಿ ಸ್ವಯಂ ಮೌಲ್ಯಮಾಪನ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಹಾಗಾಗಿ, ಪ್ರತಿ ಹಂತದಲ್ಲಿ ಎದುರಾಗುವ ಅಪಾಯವನ್ನು ಬಹುಬೇಗ ಅರಿತು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಹಕಾರಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಸೈಬರ್ ವಂಚನೆ ತಡೆಗೆ ಸಂಬಂಧಿಸಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬ್ಯಾಂಕ್‌ ಬಹುಹಂತದ ಸೈಬರ್ ಭದ್ರತಾ ವ್ಯವಸ್ಥೆ ಹೊಂದಿದೆ. ಇದಕ್ಕಾಗಿಯೇ ಬೆಂಗಳೂರಿನಲ್ಲಿ ಪ್ರತ್ಯೇಕ ಕೇಂದ್ರ ತೆರೆಯಲಾಗಿದೆ. ಇದರ ನಿರ್ವಹಣೆಗೆ ತಂಡ ಕೂಡ ಇದೆ. ಇಡೀ ಭದ್ರತಾ ವ್ಯವಸ್ಥೆಯ ಮೇಲೆ ಆಡಳಿತ ಮಂಡಳಿಯು ನಿಗಾ ಇಟ್ಟಿದೆ ಎಂದು ವಿವರಿಸುತ್ತಾರೆ. 

ಗ್ರಾಮೀಣ ಆರ್ಥಿಕತೆ ಅಭಿವೃದ್ಧಿಗೆ ಒತ್ತು

ಕರ್ನಾಟಕದ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯು ಪ್ರಗತಿಯ ಹಾದಿಯಲ್ಲಿದೆ. ಗ್ರಾಮೀಣ ಹಾಗೂ ಅರೆ ಪಟ್ಟಣ ಪ್ರದೇಶಗಳಲ್ಲಿ ಇರುವ ಬ್ಯಾಂಕ್‌ನ ಶಾಖೆಗಳ ಮೂಲಕ ಇದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಶೇಖರ್‌ ರಾವ್‌ ಹೇಳಿದ್ದಾರೆ.   ಕೋವಿಡ್‌ ಕಾಲಘಟ್ಟದಲ್ಲಿ ಗ್ರಾಮೀಣ ಆರ್ಥಿಕತೆಗೆ ಪೆಟ್ಟು ಬಿದ್ದಿತ್ತು. ಈಗ ಚೇತರಿಸಿಕೊಂಡಿದೆ. ಇದು ಸಾಲದ ಬೇಡಿಕೆಯನ್ನು ಹೆಚ್ಚಿಸಿದೆ. ಇದಕ್ಕೆ ಪೂರಕವಾಗಿ ಬ್ಯಾಂಕ್‌ ಸ್ಪಂದಿಸುತ್ತಿದೆ ಎಂಬುದು ಅವರ ವಿವರಣೆ. ರಾಜ್ಯದ ಕೃಷಿಕರ ಅಭ್ಯುದಯಕ್ಕೆ ಬ್ಯಾಂಕ್‌ ಬದ್ಧವಾಗಿದೆ. ಕೃಷಿ ಹಿನ್ನೆಲೆ ಹೊಂದಿರುವ ಅಧಿಕಾರಿಗಳನ್ನೇ ರೈತರಿಗೆ ಅನುಕೂಲ ಕಲ್ಪಿಸಲು ನಿಯೋಜಿಸಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್‌ನ ನೆಟ್‌ವರ್ಕ್‌ ಸದೃಢವಾಗಿದೆ. ರೈತರ ಅಗತ್ಯತೆಗೆ ಅನುಗುಣವಾಗಿ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ ಎನ್ನುತ್ತಾರೆ ಅವರು.

ಗ್ರಾಹಕ ಸ್ನೇಹಿ ಯೋಜನೆ

ಡಿಜಿಟಲ್‌ ಬ್ಯಾಂಕಿಂಗ್ ವ್ಯವಸ್ಥೆಗೆ ಸಂಬಂಧಿಸಿದ ಹೊಸ ಅನ್ವೇಷಣೆಗಳಲ್ಲಿ ಬ್ಯಾಂಕ್‌  ಮುಂಚೂಣಿಯಲ್ಲಿದೆ. ಗ್ರಾಹಕರಿಗೆ ಆಧುನಿಕ ಬ್ಯಾಂಕಿಂಗ್‌ ಸವಲತ್ತು ಕಲ್ಪಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಎಲ್ಲಾ ವರ್ಗದ ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸುತ್ತಿದೆ ಎನ್ನುತ್ತಾರೆ ಶೇಖರ್‌ ರಾವ್. ಕೋವಿಡ್‌ ಕಾಲಘಟ್ಟದಲ್ಲಿ ಬ್ಯಾಂಕ್‌ ಸಂಕಷ್ಟ ಎದುರಿಸಿತ್ತು. ಆ ಬಳಿಕ ಬ್ಯಾಂಕ್‌ನ ಸಂಪತ್ತು ಸದೃಢವಾಗಿದೆ. ಗ್ರಾಹಕ ಸ್ನೇಹಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಶತಮಾನೋತ್ಸವದ ಅಂಗವಾಗಿ ಎಲ್ಲಾ ವಲಯಗಳು ಮತ್ತು ಪ್ರಮುಖ ಮಹಾನಗರಗಳಲ್ಲಿ ಗ್ರಾಹಕರ ಭೇಟಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೆ ಗ್ರಾಹಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ವಿವರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.