ADVERTISEMENT

ಕೈಗಾ ಟೆಂಡರ್‌: ಮೇಘಾ ಕಂಪನಿ ಪಾಲು

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 15:17 IST
Last Updated 26 ಜೂನ್ 2024, 15:17 IST
   

ಬೆಂಗಳೂರು: ರಾಜ್ಯದ ಕೈಗಾ ಸ್ಥಾವರದಲ್ಲಿ ಪರಮಾಣು ವಿದ್ಯುತ್‌ ಉತ್ಪಾದಿಸುವ ಯೋಜನೆಗೆ ಸಂಬಂಧಿಸಿದ ಟೆಂಡರ್‌ ಪಡೆಯುವಲ್ಲಿ ಮೇಘಾ ಎಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಯಶಸ್ವಿಯಾಗಿದೆ.

ನ್ಯೂಕ್ಲಿಯರ್‌ ಪವರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎನ್‌ಪಿಸಿಐಎಲ್‌) ಶುದ್ಧ ಹಾಗೂ ಸುರಕ್ಷಿತ ಅಣು ವಿದ್ಯುತ್‌ ಉತ್ಪಾದನೆಗಾಗಿ ಮಹತ್ವದ ಹೆಜ್ಜೆ ಇಟ್ಟಿದೆ. ಕೈಗಾದಲ್ಲಿ 2x700 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಯೋಜನೆ ರೂಪಿಸಿದೆ.

ಇದಕ್ಕಾಗಿ ಎನ್‌ಪಿಸಿಐಎಲ್‌ ₹12,799 ಕೋಟಿ ಮೊತ್ತದ ಟೆಂಡರ್‌ ಕರೆದಿತ್ತು. ಸದ್ಯ ಈ ಪ್ರಕ್ರಿಯೆ ಪೂರ್ಣಗೊಂಡಿದೆ. ಕಡಿಮೆ ಮೊತ್ತದ ಬಿಡ್‌ ಸಲ್ಲಿಸಿದ್ದ ಮೇಘಾ ಎಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ ಈ ಟೆಂಡರ್‌ ಪಡೆದಿದೆ. 

ADVERTISEMENT

2023ರ ಮೇ ತಿಂಗಳಿನಲ್ಲಿ ಈ ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಿತ್ತು. ಅದೇ ವರ್ಷದ ಅಕ್ಟೋಬರ್‌ನಲ್ಲಿ ತಾಂತ್ರಿಕ ಬಿಡ್ ತೆರೆಯಲ್ಪಟ್ಟಿತು. ಅತ್ಯಂತ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಬಿಎಚ್ಇಎಲ್, ಎಲ್ ಆ್ಯಂಡ್‌ ಟಿ ಮತ್ತು ಎಂಇಐಎಲ್ ಆಸಕ್ತಿ ತೋರಿಸಿದ್ದವು.

‘ಈ ಒಪ್ಪಂದವು ಎಂಇಐಎಲ್‌ಗೆ ಮಹತ್ವದ ಯೋಜನೆಯಾಗಿದೆ. ಜತೆಗೆ, ಪರಮಾಣು ಇಂಧನ ಕ್ಷೇತ್ರದ ಪ್ರವೇಶಕ್ಕೆ ಉತ್ತಮ ವೇದಿಕೆಯನ್ನು ಕಲ್ಪಿಸಿದೆ’ ಎಂದು ಎಂಇಐಎಲ್ ನಿರ್ದೇಶಕ ಸಿ.ಎಚ್. ಸುಬ್ಬಯ್ಯ ತಿಳಿಸಿದ್ದಾರೆ.

‘ಕಂಪನಿಯು ಉತ್ಕೃಷ್ಟತೆ ಮತ್ತು ನಾವೀನ್ಯತೆಗೆ ಹೆಸರುವಾಸಿಯಾಗಿದೆ. ಈ ಯೋಜನೆ ಮೂಲಕ ದೇಶದ ಶುದ್ಧ ಇಂಧನ ಪರಿಹಾರ ಮತ್ತು ಸ್ವಾವಲಂಬನೆಗೆ ಕೊಡುಗೆ ಸಲ್ಲಿಸಲು ಉತ್ಸುಕವಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.