ನೈರೋಬಿ: ಕೆನ್ಯಾದ ನೈರೋಬಿ ನಗರದಲ್ಲಿರುವ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಗುತ್ತಿಗೆ ಪಡೆಯಲು ಮುಂದಾಗಿರುವ ಭಾರತದ ಅದಾನಿ ಸಮೂಹದ ವಿರುದ್ಧ ವಿಮಾನ ನಿಲ್ದಾಣದ ಕಾರ್ಮಿಕರ ಒಕ್ಕೂಟದಿಂದ ಬುಧವಾರ ಪ್ರತಿಭಟನೆ ನಡೆಯಿತು.
ಇದರಿಂದ ಜೋಮೊ ಕೆನ್ಯಾತಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಜೆಕೆಐಎ) ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಯಿತು. ನೂರಾರು ಪ್ರಯಾಣಿಕರು ನಿಲ್ದಾಣದಲ್ಲಿಯೇ ಉಳಿಯುವಂತಾಗಿದೆ.
ನಿಲ್ದಾಣದ ನಾವೀನ್ಯತೆ, ಹೆಚ್ಚುವರಿ ರನ್ ವೇ ಮತ್ತು ಟರ್ಮಿನಲ್ ನಿರ್ಮಾಣಕ್ಕೆ ಅಲ್ಲಿನ ಸರ್ಕಾರವು 30 ವರ್ಷದವರೆಗೆ ಅದಾನಿ ಸಮೂಹದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕೆ ಅದಾನಿ ಸಮೂಹವು 185 ಕೋಟಿ ಡಾಲರ್ (₹15,536 ಕೋಟಿ) ವ್ಯಯಿಸಲಿದೆ.
ಈ ಒಪ್ಪಂದದಿಂದ ಸ್ಥಳೀಯ ಸಿಬ್ಬಂದಿ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಸರ್ಕಾರ ಈ ಒಪ್ಪಂದದಿಂದ ಹಿಂದೆ ಸರಿಯುವವರೆಗೂ ಪ್ರತಿಭಟನೆಯನ್ನು ಮುಂದುವರಿಸಲಾಗುವುದು ಎಂದು ಒಕ್ಕೂಟ ತಿಳಿಸಿದೆ.
ಈ ಒಪ್ಪಂದ ಸಂಬಂಧ ಕೆನ್ಯಾದ ಕಾನೂನು ಸೊಸೈಟಿ ಮತ್ತು ಮಾನವ ಹಕ್ಕುಗಳ ಆಯೋಗವು ನ್ಯಾಯಾಲಯದ ಮೊರೆ ಹೋಗಿದ್ದು ಒಪ್ಪಂದದಲ್ಲಿ ಪಾರದರ್ಶಕತೆಯ ಕೊರತೆ ಇದೆ ಎಂದು ಅರ್ಜಿಯಲ್ಲಿ ದೂರಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಅದಾನಿ ಕಂಪನಿಯ ಈ ಒಪ್ಪಂದಕ್ಕೆ ತಡೆಯಾಜ್ಞೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.