ADVERTISEMENT

120 ಕೆ.ಜಿ ಅಕ್ರಮ ಚಿನ್ನ ವಶ

ತ್ರಿಶೂರ್‌: ಆಭರಣ ತಯಾರಿಕಾ ಘಟಕಗಳ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:33 IST
Last Updated 24 ಅಕ್ಟೋಬರ್ 2024, 15:33 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ತ್ರಿಶೂರ್‌: ಇಲ್ಲಿನ ಚಿನ್ನಾಭರಣ ತಯಾರಿಕಾ ಘಟಕಗಳ ಮೇಲೆ ಕೇರಳದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 120 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಚಿನ್ನದ ಅಕ್ರಮ ವ್ಯಾಪಾರದ ಮೂಲಕ ತೆರಿಗೆ ವಂಚಿಸಲಾಗುತ್ತಿದೆ ಎಂಬ ಆರೋಪದ ಮೇರೆಗೆ ಬುಧವಾರದ ಸಂಜೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಗುರುವಾರ ಮುಕ್ತಾಯಗೊಂಡಿದೆ. 

ಕೇರಳದಲ್ಲಿ ನಡೆದ ಅತಿದೊಡ್ಡ ಕಾರ್ಯಾಚರಣೆಗಳ ಪೈಕಿ ಇದು ಒಂದಾಗಿದ್ದು, 700ಕ್ಕೂ ಹೆಚ್ಚು ಅಧಿಕಾರಿಗಳು ಪಾಲ್ಗೊಂಡಿದ್ದರು. ತಯಾರಿಕಾ ಘಟಕಗಳು ಮತ್ತು ಆಭರಣ ತಯಾರಕರ ಮನೆಗಳು ಸೇರಿ 78 ಸ್ಥಳಗಳಲ್ಲಿ ದಾಳಿ ನಡೆದಿದೆ. 

ADVERTISEMENT

ತೆರಿಗೆ ಮತ್ತು ಶುಲ್ಕ ‍ಪಾವತಿ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ಎಸಗಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಎಸ್‌ಟಿ ವಿಶೇಷ ಆಯುಕ್ತ ಅಬ್ರಹಾಂ ರೆನ್ ಎಸ್. ಅವರು ಈ ರಹಸ್ಯ ಕಾರ್ಯಾಚರಣೆಯ ನೇತೃತ್ವವಹಿಸಿದ್ದರು. ತ್ರಿಶೂರ್‌ನಲ್ಲಿ ತರಬೇತಿ ಕಾರ್ಯಕ್ರಮವಿದೆ. ಎಲ್ಲರೂ ಇದರಲ್ಲಿ ಭಾಗವಹಿಸಬೇಕು ಎಂದು ಅಧಿಕಾರಿಗಳಿಗೆ ಸಂದೇಶ ರವಾನಿಸಲಾಗಿತ್ತು. ದಾಳಿ ಬಗ್ಗೆ ಅಂತಿಮ ಕ್ಷಣದವರೆಗೂ ಹಿರಿಯ ಅಧಿಕಾರಿಗಳು ಗುಟ್ಟು ಬಿಟ್ಟುಕೊಟ್ಟಿರಲಿಲ್ಲ ಎಂದು ಹೇಳಲಾಗಿದೆ.

ರಾಜ್ಯದ ವಿವಿಧೆಡೆಯಿಂದ ಬಸ್‌ಗಳ ಮೂಲಕ ಅಧಿಕಾರಿಗಳು ಆಗಮಿಸಿದ್ದರು. ಈ ಬಸ್‌ಗಳಿಗೆ ‘ಅಧ್ಯಯನ ಪ್ರವಾಸ’ ಎಂದು ಬ್ಯಾನರ್‌ ಅಳವಡಿಸಲಾಗಿತ್ತು.

ಕಾರ್ಯಾಚರಣೆಗೆ ‘ಟೊರೆ ಡೆಲ್ ಓರೊ’ ಎಂದು ಹೆಸರಿಸಲಾಗಿತ್ತು. ಇದು ಸ್ಪೇನ್‌ನಲ್ಲಿರುವ ‘ಗೋಲ್ಡನ್‌ ಟವರ್‌’ನ ಹೆಸರಾಗಿದೆ.

ತ್ರಿಶೂರ್‌ ಕೇರಳದ ಚಿನ್ನಾಭರಣದ ರಾಜಧಾನಿ ಎಂದು ಪ್ರಸಿದ್ಧಿ ಪಡೆದಿದೆ. ರಾಜ್ಯದ ಶೇ 70ರಷ್ಟು ಚಿನ್ನಾಭರಣದ ವಹಿವಾಟು ಇಲ್ಲಿ ನಡೆಯುತ್ತದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಎಸ್‌ಟಿ ಗುಪ್ತಚರ ವಿಭಾಗದ ಉಪ ಆಯುಕ್ತ ದಿನೇಶ್‌ ಕುಮಾರ್‌, ಅಕ್ರಮ ಚಟುವಟಿಕೆ ಮೇಲೆ ಕಾರ್ಯಾಚರಣೆಯನ್ನು ಮುಂದುವರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

‘ಕೆಲವು ಸ್ಥಳಗಳಲ್ಲಿ ದಾಳಿಗೆ ಹೆದರಿ ಕೆಲಸಗಾರರು ಚಿನ್ನದೊಟ್ಟಿಗೆ ಓಡಿ ಹೋಗುತ್ತಿದ್ದರು. ಅವರನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆಯಲಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.