ನವದೆಹಲಿ: ನೀತಿ ಆಯೋಗ ಪ್ರಕಟಿಸಿರುವ 2023–24ನೇ ಆರ್ಥಿಕ ವರ್ಷದ ‘ಸುಸ್ಥಿರ ಅಭಿವೃದ್ಧಿ ಗುರಿ ಭಾರತದ ಸೂಚ್ಯಂಕ’ದಲ್ಲಿ (ಎಸ್‌ಡಿಜಿ) ಉತ್ತರಾಖಂಡ ಮತ್ತು ಕೇರಳ ಅತ್ಯುತ್ತಮ ಸಾಧಕ ರಾಜ್ಯಗಳೆಂಬ ಶ್ರೇಯಕ್ಕೆ ಭಾಜನವಾಗಿದ್ದು, ಜಂಟಿಯಾಗಿ ಅಗ್ರಸ್ಥಾನ ಹಂಚಿಕೊಂಡಿವೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾಮಾಜಿಕ, ಆರ್ಥಿಕ ಮತ್ತು ಪರಿಸರದ ಬೆಳವಣಿಗೆಗೆ ಈ ವರದಿ ಕನ್ನಡಿ ಹಿಡಿದಿದೆ. ಬಿಹಾರವು ಕೊನೆಯ ಸ್ಥಾನ ಪಡೆದಿದೆ.
ಬಡತನ ನಿರ್ಮೂಲನೆ, ಆರ್ಥಿಕತೆ ಬೆಳವಣಿಗೆ, ಹವಾಮಾನ ಬದಲಾವಣೆ ತಡೆ ಮತ್ತು ಪರಿಸರ ಸಂರಕ್ಷಣೆ ಸಂಬಂಧ ರೂಪಿಸಿರುವ ಕ್ರಮಗಳಿಂದಾಗಿ ಈ ಬೆಳವಣಿಗೆ ಸಾಧ್ಯವಾಗಿದೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ.
‘ಸುಸ್ಥಿರ ಅಭಿವೃದ್ಧಿಗೆ ಗುರಿ ಸಾಧನೆಗಾಗಿ 16 ಗುರಿಗಳನ್ನು ನಿಗದಿಪಡಿಸಲಾಗಿದ್ದು, ಇವುಗಳ ಸುಧಾರಣೆಗೆ ಸರ್ಕಾರವು ನೆರವು ನೀಡಿದೆ’ ಎಂದು ನೀತಿ ಆಯೋಗದ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ತಿಳಿಸಿದ್ದಾರೆ.
ಕೊನೆಯ ಸ್ಥಾನ: ಬಿಹಾರ, ಜಾರ್ಖಂಡ್ ಹಾಗೂ ನಾಗಾಲ್ಯಾಂಡ್
4 ಕೋಟಿ: ಪಿ.ಎಂ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣ
11 ಕೋಟಿ: ಗ್ರಾಮೀಣ ಪ್ರದೇಶದಲ್ಲಿ 2.23 ಲಕ್ಷ ಸಮುದಾಯ ಶೌಚಾಲಯಗಳ ನಿರ್ಮಾಣ
10 ಕೋಟಿ: ಪಿ.ಎಂ ಉಜ್ವಲಾ ಯೋಜನೆಯಡಿ ಎಲ್‌ಪಿಜಿ ಸಂಪರ್ಕ
14.9 ಕೋಟಿ: ಜಲಜೀವನ್ ಮಿಷನ್‌ನಡಿ ನಲ್ಲಿ ಸಂಪರ್ಕ
30 ಕೋಟಿ: ಆಯುಷ್ಮಾನ್ ಭಾರತ್–ಪ್ರಧಾನ ಮಂತ್ರಿ ಆರೋಗ್ಯ ಯೋಜನೆಯ ಫಲಾನುಭವಿಗಳು
₹34 ಲಕ್ಷ ಕೋಟಿ: ಜನಧನ್ ಖಾತೆ ಮೂಲಕ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ
ಪ್ರಮುಖ ಗುರಿಗಳು
ಬಡತನ ನಿರ್ಮೂಲನೆ, ಹಸಿವು ನಿವಾರಣೆ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಶುದ್ಧ ನೀರು ಮತ್ತು ನೈರ್ಮಲ್ಯ, ಕೈಗೆಟಕುವ ನವೀಕರಿಸಬಹುದಾದ ಇಂಧನ, ಅರ್ಹ ಕೆಲಸ ಮತ್ತು ಆರ್ಥಿಕತೆ ಬೆಳವಣಿಗೆ, ಕೈಗಾರಿಕೆ–ಅನ್ವೇಷಣೆ–ಮೂಲ ಸೌಕರ್ಯ, ಅಸಮಾನತೆ ನಿರ್ಮೂಲನೆ, ಸುಸ್ಥಿರ ನಗರಗಳು ಮತ್ತು ಸಮುದಾಯಗಳು, ಹೊಣೆಯಾಧಾರಿತ ಬಳಕೆ ಮತ್ತು ಉತ್ಪಾದನೆ, ಹವಾಮಾನ, ಜಲಚರಗಳ ಸಂರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ, ಶಾಂತಿ–ನ್ಯಾಯ ಮತ್ತು ಶಕ್ತಿಯುತ ಸಂಸ್ಥೆಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.