ನವದೆಹಲಿ: ದೇಶದ ಎಂಟು ಮೂಲಸೌಕರ್ಯ ವಲಯಗಳ ಬೆಳವಣಿಯು 2023ರ ಆಗಸ್ಟ್‌ನಲ್ಲಿ ಶೇ 12.1ರಷ್ಟು ಆಗಿದೆ. ಈ ಮೂಲಕ 14 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ.
ಮುಖ್ಯವಾಗಿ ಕಲ್ಲಿದ್ದಲು, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ವಲಯಗಳ ಉತ್ಪಾದನೆ ಹೆಚ್ಚಾಗಿರುವುದರಿಂದ ಈ ಪ್ರಮಾಣದ ಬೆಳವಣಿಗೆ ಸಾಧ್ಯವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ತಿಳಿಸಿವೆ.
2022ರ ಆಗಸ್ಟ್‌ನಲ್ಲಿ ಈ ವಲಯಗಳು ಶೇ 4.2ರಷ್ಟು ಬೆಳವಣಿಗೆ ಕಂಡಿದ್ದವು. ಈ ವರ್ಷದ ಆಗಸ್ಟ್‌ನಲ್ಲಿ ಆಗಿರುವ ಬೆಳವಣಿಗೆಯು 2022ರ ಜೂನ್ ತಿಂಗಳ ನಂತರದ ಗರಿಷ್ಠ ಮಟ್ಟದ್ದಾಗಿದೆ. 2022ರ ಜೂನ್‌ನಲ್ಲಿ ಶೇ 13.2ರಷ್ಟು ಬೆಳವಣಿಗೆ ಆಗಿತ್ತು.
ಸಂಸ್ಕರಿಸಿದ ಉತ್ಪನ್ನಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ವಲಯಗಳ ಬೆಳವಣಿಗೆಯೂ ಹೆಚ್ಚಾಗಿದೆ.
2023–24ರ ಏಪ್ರಿಲ್–ಆಗಸ್ಟ್ ಅವಧಿಯಲ್ಲಿ 8 ವಲಯಗಳ ಬೆಳವಣಿಗೆಯು ಶೇ 7.7ರಷ್ಟು ಆಗಿದೆ. 2022–23ರ ಏಪ್ರಿಲ್–ಆಗಸ್ಟ್ ಅವಧಿಯಲ್ಲಿ ಶೇ 10ರಷ್ಟು ಬೆಳವಣಿಗೆ ಕಂಡುಬಂದಿತ್ತು ಎಂದು ಸಚಿವಾಲಯ ತಿಳಿಸಿದೆ.
‘ಸಾಮಾನ್ಯವಾಗಿ ಮುಂಗಾರು ಅವಧಿಯಲ್ಲಿ ನಿರ್ಮಾಣ ಚಟುವಟಿಕೆಗಳು ನಡೆಯುವುದಿಲ್ಲ. ಈ ಬಾರಿ ಮುಂಗಾರು ಮಳೆಯು ವಾಡಿಕೆಗಿಂತಲೂ ಕಡಿಮೆ ಆಗಿರುವುದರಿಂದ ಮೂಲಸೌಕರ್ಯ ವಲಯದಲ್ಲಿ ಚಟುವಟಿಕೆ ಹೆಚ್ಚಾಗಲು ಕಾರಣವಾಯಿತು’ ಎಂದು ಐಸಿಆರ್‌ಎನ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.
‘ಮೂಲಸೌಕರ್ಯದ ಉತ್ತಮ ಬೆಳವಣಿಗೆ ಮತ್ತು ರೈಲ್ವೆ ಸರಕು ಸಾಗಣೆ ಹೆಚ್ಚಾಗಿರುವುದರಿಂದ ದೇಶದ ಕೈಗಾರಿಕಾ ಉತ್ಪಾದನೆಯು ಆಗಸ್ಟ್‌ನಲ್ಲಿ ಶೇ 9ರಿಂದ ಶೇ 11ರ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ’ ಎಂದೂ ಅವರು ತಿಳಿಸಿದ್ದಾರೆ. ಕೈಗಾರಿಕಾ ಉತ್ಪಾದನೆ ಸೂಚ್ಯಂಕದಲ್ಲಿ (ಐಐಪಿ) ಮೂಲಸೌಕರ್ಯ ವಲಯಗಳ ಪಾಲು ಶೇ 40.27ರಷ್ಟು ಇದೆ.
ಮೂಲಸೌಕರ್ಯ ಅಭಿವೃದ್ಧಿಗಾಗಿ ಸರ್ಕಾರವು ಮಾಡಿರುವ ಬಂಡವಾಳ ವೆಚ್ಚವು ಏಪ್ರಿಲ್–ಆಗಸ್ಟ್ ಅವಧಿಯಲ್ಲಿ ₹3.74 ಲಕ್ಷ ಕೋಟಿ ಆಗಿದೆ. ಅಂದರೆ, ವಾರ್ಷಿಕ ಬಜೆಟ್ ಅಂದಾಜಿನ ಶೇ 37.4ರಷ್ಟು. ಹಿಂದಿನ ಇದೇ ಅವಧಿಯಲ್ಲಿ ₹2.52 ಲಕ್ಷ ಕೋಟಿ ವೆಚ್ಚ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.