ADVERTISEMENT

ಮೂಲಸೌಕರ್ಯ: ಪ್ರಮುಖ 8 ವಲಯಗಳ ಬೆಳವಣಿಗೆ ಸೆಪ್ಟೆಂಬರ್‌ನಲ್ಲಿ ಶೇ 8.1ಕ್ಕೆ ಇಳಿಕೆ

ಪಿಟಿಐ
Published 31 ಅಕ್ಟೋಬರ್ 2023, 13:44 IST
Last Updated 31 ಅಕ್ಟೋಬರ್ 2023, 13:44 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಪ್ರಮುಖ 8 ಮೂಲಸೌಕರ್ಯ ವಲಯಗಳ ಬೆಳವಣಿಗೆಯು ಸೆಪ್ಟೆಂಬರ್‌ನಲ್ಲಿ ಶೇ 8.1ಕ್ಕೆ ಇಳಿಕೆ ಕಾಣುವ ಮೂಲಕ ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಮೇ ತಿಂಗಳಿನಲ್ಲಿ ವಲಯಗಳ ಬೆಳವಣಿಗೆಯು ಶೇ 5.2ರಷ್ಟು ಕನಿಷ್ಠ ಮಟ್ಟದಲ್ಲಿ ದಾಖಲಾಗಿತ್ತು. 2022ರ ಸೆಪ್ಟೆಂಬರ್‌ನಲ್ಲಿ ಈ ವಲಯಗಳು ಶೇ 8.3ರಷ್ಟು ಬೆಳವಣಿಗೆ ಕಂಡಿದ್ದವು. 

ಸಂಸ್ಕರಣಾ ಉತ್ಪನ್ನಗಳು, ರಸಗೊಬ್ಬರ, ಸಿಮೆಂಟ್‌ ಮತ್ತು ವಿದ್ಯುತ್ ವಲಯಗಳ ಉತ್ಪಾದನೆಯು ಇಳಿಕೆ ಕಂಡಿರುವುದರಿಂದ ವಲಯದ ಒಟ್ಟಾರೆ ಬೆಳವಣಿಗೆ ಪ್ರಮಾಣ ತಗ್ಗಿದೆ ಎಂದು ಸರ್ಕಾರ ತಿಳಿಸಿದೆ.

ADVERTISEMENT

ಇದೇ ವರ್ಷದ ಆಗಸ್ಟ್‌ನಲ್ಲಿ 8 ವಲಯಗಳ ಬೆಳವಣಿಗೆಯು ಶೇ 12.5ರಷ್ಟು ಆಗಿತ್ತು. 2022ರ ಜೂನ್‌ ಬಳಿಕ ಗರಿಷ್ಠ ಮಟ್ಟ ತಲುಪಿತ್ತು.  2023ರ ಸೆಪ್ಟೆಂಬರ್‌ನಲ್ಲಿ ಕಲ್ಲಿದ್ದಲು, ನೈಸರ್ಗಿಕ ಅನಿಲ ಮತ್ತು ಉಕ್ಕು ಉತ್ಪಾದನೆಯು ಕ್ರಮವಾಗಿ ಶೇ 16.1, ಶೇ 6.5 ಮತ್ತು ಶೇ 9.6ಕ್ಕೆ ಏರಿಕೆ ಕಂಡಿದೆ.

ಮಳೆ ಸುಧಾರಿಸಿದ್ದರಿಂದ ಮೂಲಸೌಕರ್ಯ ವಲಯಗಳ ಚಟುವಟಿಕೆ ತಗ್ಗಿದೆ. ರಸಗೊಬ್ಬರವನ್ನು ಹೊರತುಪಡಿಸಿ ಉಳಿದೆಲ್ಲಾ ವಲಯಗಳ ಉತ್ಪಾದನೆ ಕಡಿಮೆ ಆಗಿದೆ. ಸಿಮೆಂಟ್‌ ತಯಾರಿಕೆಯು ಆರು ತಿಂಗಳ ಕನಿಷ್ಠ ಮಟ್ಟಕ್ಕೆ (ಶೇ 4.7) ಇಳಿಕೆ ಕಂಡಿದೆ. ಕೈಗಾರಿಕಾ ಉತ್ಪಾದನೆ ಸೂಚ್ಯಂಕದ (ಐಐಪಿ) ಬೆಳವಣಿಗೆಯು ಸೆಪ್ಟೆಂಬರ್‌ನಲ್ಲಿ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಐಸಿಆರ್‌ಎ ಲಿಮಿಟೆಡ್‌ನ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ಈ ಎಂಟು ಕೈಗಾರಿಕೆಗಳು ಕೈಗಾರಿಕಾ ಉತ್ಪಾದನೆ ಸೂಚ್ಯಂಕಕ್ಕೆ (ಐಐಪಿ) ಶೇ 40.27ರಷ್ಟು ಕೊಡುಗೆ ನೀಡುತ್ತಿವೆ. ಈ ವಲಯಗಳ ಬೆಳವಣಿಗೆಯು ಕಳೆದ ವರ್ಷದ ಏಪ್ರಿಲ್‌–ಸೆಪ್ಟೆಂಬರ್‌ನಲ್ಲಿ ಶೇ 9.8ರಷ್ಟು ಇದ್ದಿದ್ದು, ಈ ವರ್ಷದ ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ಶೇ 7.8ಕ್ಕೆ ಇಳಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.