ADVERTISEMENT

ವೊಡಾಫೋನ್‌-ಐಡಿಯಾ: ಸರ್ಕಾರಕ್ಕೆ ಷೇರು ವರ್ಗಾವಣೆ ಮಾಡಲು ಮುಂದಾದ ಬಿರ್ಲಾ

ಪಿಟಿಐ
Published 2 ಆಗಸ್ಟ್ 2021, 15:19 IST
Last Updated 2 ಆಗಸ್ಟ್ 2021, 15:19 IST

ನವದೆಹಲಿ: ಸಾಲದ ಸುಳಿಗೆ ಸಿಲುಕಿರುವ ವೊಡಾಫೋನ್‌ ಐಡಿಯಾ ಲಿಮಿಟೆಡ್‌ (ವಿಐಎಲ್‌) ಕಂಪನಿಯಲ್ಲಿ ತಾವು ಹೊಂದಿರುವ ಷೇರುಗಳನ್ನು ಸರ್ಕಾರಕ್ಕೆ ವರ್ಗಾವಣೆ ಮಾಡಲು ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರಮಂಗಲಂ ಬಿರ್ಲಾ ಮುಂದೆಬಂದಿದ್ದಾರೆ. ಸರ್ಕಾರ ಮಾತ್ರವೇ ಅಲ್ಲದೆ, ವಿಐಎಲ್‌ ಕಂಪನಿಯನ್ನು ಮುನ್ನಡೆಸುವ ಶಕ್ತಿ ಇದೆ ಎಂದು ಸರ್ಕಾರ ಗುರುತಿಸುವ ಇತರ ಯಾವುದೇ ಕಂಪನಿಗೆ ಕೂಡ ಷೇರು ವರ್ಗಾವಣೆ ಮಾಡಲು ಅವರು ಮುಂದಾಗಿದ್ದಾರೆ.

ಬಿರ್ಲಾ ಅವರು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರಿಗೆ ಜೂನ್‌ 7ರಂದು ಬರೆದಿರುವ ಪತ್ರದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಅಧಿಕೃತ ಅಂಕಿ–ಅಂಶಗಳ ಪ್ರಕಾರ ವಿಐಎಲ್‌ ಕಂಪನಿಯು ಹೊಂದಾಣಿಕೆ ಮಾಡಿದ ಒಟ್ಟು ಆದಾಯ (ಎಜಿಆರ್‌) ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ₹ 50,399 ಕೋಟಿ ಇನ್ನಷ್ಟೇ ಪಾವತಿಸಬೇಕಿದೆ.

ಎಜಿಆರ್‌ ಲೆಕ್ಕಹಾಕಿದ್ದು ಸರಿಯಾಗಿಲ್ಲ ಎಂದು ವಿಐಎಲ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಆದರೆ, ಕಂಪನಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ‘ಎಜಿಆರ್‌ ಬಾಕಿ, ತರಂಗಾಂತರಕ್ಕೆ ಸಂಬಂಧಿಸಿದ ಪಾವತಿಗೆ ಸಾಕಷ್ಟು ಕಾಲಾವಕಾಶ, ಸೇವಾ ವೆಚ್ಚಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಶುಲ್ಕ ನಿಗದಿ ಮಾಡುವ ವಿಚಾರದಲ್ಲಿ ಸ್ಪಷ್ಟತೆ ಇಲ್ಲದಿರುವಾಗ ಹೂಡಿಕೆದಾರರು ಕಂಪನಿಯಲ್ಲಿ ಹಣ ಹೂಡಿಕೆ ಮಾಡಲು ಸಿದ್ಧರಿಲ್ಲ’ ಎಂದು ಬಿರ್ಲಾ ಅವರು ಪತ್ರದಲ್ಲಿ ಬರೆದಿದ್ದಾರೆ. ಅವರು ಕಂಪನಿಯಲ್ಲಿ ಶೇಕಡ 27ರಷ್ಟು ಷೇರು ಹೊಂದಿದ್ದಾರೆ.

ADVERTISEMENT

ಕೇಂದ್ರ ಸರ್ಕಾರದಿಂದ ಈ ಮೂರು ವಿಚಾರಗಳ ಬಗ್ಗೆ ತಕ್ಷಣ ಸಹಾಯ ಸಿಗದೆ ಇದ್ದರೆ ಕಂಪನಿಯ ಹಣಕಾಸಿನ ಸ್ಥಿತಿಯು ‘ಕುಸಿದುಬೀಳುವ ಹಂತಕ್ಕೆ’ ತಲುಪುತ್ತದೆ ಎಂದೂ ಅವರು ಪತ್ರದಲ್ಲಿ ಹೇಳಿದ್ದಾರೆ. ಈ ವಿಚಾರವಾಗಿ ಆದಿತ್ಯ ಬಿರ್ಲಾ ಸಮೂಹ ಹಾಗೂ ವಿಐಎಲ್‌ ಕಡೆಯಿಂದ ತಕ್ಷಣಕ್ಕೆ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಬಿರ್ಲಾ ಅವರು ಪತ್ರ ಬರೆದ ನಂತರದಲ್ಲಿ ಯಾವುದಾದರೂ ಮಾತುಕತೆಗಳು ನಡೆದಿವೆಯೇ ಎಂಬುದು ಖಚಿತವಾಗಿಲ್ಲ. 2020ರ ಸೆಪ್ಟೆಂಬರ್‌ನಲ್ಲಿ ವಿಐಎಲ್‌ ಕಂಪನಿಗೆ ₹ 25 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಕಂಪನಿಯ ಆಡಳಿತ ಮಂಡಳಿ ಸಮ್ಮತಿ ನೀಡಿತ್ತು. ಆದರೆ, ಅಷ್ಟು ಮೊತ್ತ ಸಂಗ್ರಹಿಸಲು ಕಂಪನಿಗೆ ಸಾಧ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.