ನವದೆಹಲಿ: ಮೈಂಡ್‌ಟ್ರೀ ಕಂಪನಿಯ ಸಹ ಸ್ಥಾಪಕ ಕೃಷ್ಣಕುಮಾರ್ ನಟರಾಜನ್ ಮತ್ತು ಅವರ ಕುಟುಂಬವು ಕಂಪನಿಯಲ್ಲಿನ 4.66 ಲಕ್ಷ ಷೇರುಗಳನ್ನು ಮಾರಾಟ ಮಾಡಿದೆ.
ಸೆಪ್ಟೆಂಬರ್ 15 ರಿಂದ 23ರವರೆಗಿನ ಅವಧಿಯಲ್ಲಿ ಕೃಷ್ಣಕುಮಾರ್, ಪತ್ನಿ ಅಖಿಲಾ ಮತ್ತು ಮಗ ಸಿದ್ಧಾರ್ಥ ಅವರು ತಮ್ಮ ಪಾಲಿನ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಕಂಪನಿಯು ಷೇರುಪೇಟೆಗೆ ಶನಿವಾರ ಮಾಹಿತಿ ನೀಡಿದೆ.
ಈ ಮಾರಾಟದ ಮೂಲಕ ಕಂಪನಿಯಲ್ಲಿ ಕೃಷ್ಣಕುಮಾರ್ ಕುಟುಂಬವು ಹೊಂದಿರುವ ಒಟ್ಟಾರೆ ಷೇರುಪಾಲು ಶೇ 2.29ರಿಂದ ಶೇ 2.01ಕ್ಕೆ ಇಳಿಕೆ ಆಗಿದೆ ಎಂದೂ ತಿಳಿಸಿದೆ.
ಇದಕ್ಕೂ ಮೊದಲು ಏಪ್ರಿಲ್ 30ರಿಂದ ಸೆಪ್ಟೆಂಬರ್ 14ರವರೆಗಿನ ಅವಧಿಯಲ್ಲಿ ಕೃಷ್ಣಕುಮಾರ್ ಅವರ ಕುಟುಂಬವು 42 ಲಕ್ಷ ಷೇರುಗಳನ್ನು ಮಾರಾಟ ಮಾಡಿತ್ತು.
ಕೃಷ್ಣಕುಮಾರ್ ಅವರು 2.85 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದು, ಅವರ ಬಳಿಕ ಸದ್ಯ ಶೇ 1.79ರಷ್ಟು ಷೇರುಗಳು ಉಳಿದಿವೆ. ಪತ್ನ ಅಖಿಲಾ ಅವರು 1.32 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದು, ಸದ್ಯ ಶೇ 0.11ರಷ್ಟು ಷೇರುಗಳು ಉಳಿದುಕೊಂಡಿವೆ.
ಮಗ ಸಿದ್ಧಾರ್ಥ ಅವರು 49,405 ಷೇರುಗಳನ್ನು ಮಾರಿದ್ದು, 1,000 ಷೇರುಗಳನ್ನು ಖರೀದಿಸಿದ್ದಾರೆ. ಅವರ ಬಳಿ ಈಗ ಶೇ 0.10ರಷ್ಟು ಷೇರುಗಳು ಇವೆ.
ಮೂಲಸೌಕರ್ಯ ವಲಯದ ಲಾರ್ಸನ್ ಆ್ಯಂಡ್ ಟೂಬ್ರೊ (ಎಲ್‌ಆ್ಯಂಡ್‌ಟಿ) ಕಂಪನಿಯು 2020ರ ಜೂನ್ ತ್ರೈಮಾಸಿಕದ ಅಂತ್ಯದ ವರೆಗಿನ ಮಾಹಿತಿಯ ಪ್ರಕಾರ ಮೈಂಡ್‌ಟ್ರೀನಲ್ಲಿ ಶೇ 61.08ರಷ್ಟು ಗರಿಷ್ಠ ಷೇರುಪಾಲನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.