ಬೆಂಗಳೂರು: ಚಿಲ್ಲರೆ ಹಣಕಾಸು ಕ್ಷೇತ್ರದ ಎಲ್ ಆ್ಯಂಡ್ ಟಿ ಫೈನಾನ್ಸ್ ಲಿಮಿಟೆಡ್ (ಎಲ್‌ಟಿಎಫ್), ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಸಂಪೂರ್ಣ ಗೃಹ ಸಾಲ ಯೋಜನೆಯನ್ನು ಆರಂಭಿಸಿದೆ.
ಗೃಹ ಸಾಲ, ಮನೆಯ ಪೀಠೋಪಕರಣ ಮತ್ತು ಅಲಂಕಾರಿಕ ವಸ್ತುಗಳ ಖರೀದಿಸುವುದಕ್ಕೆ ಅದರ ಮೊತ್ತದ ಶೇ 15ರಷ್ಟು ಸಾಲ ನೀಡಲಿದೆ. ಇದರ ಬಡ್ಡಿದರ ಕ್ರಮವಾಗಿ ಶೇ 8.65 ಮತ್ತು ಶೇ 9.75ರಿಂದ ಆರಂಭವಾಗಲಿದೆ. ಅವಧಿ 10 ವರ್ಷ ಆಗಿರಲಿದೆ.
ಗ್ರಾಹಕರ ಅನುಕೂಲಕ್ಕಾಗಿ ಡಿಜಿಟಲ್ ಪ್ರಕ್ರಿಯೆ ಮೂಲಕ ಸಾಲ ವಿತರಿಸಲಾಗುತ್ತದೆ. ಇತರೆ ಬ್ಯಾಂಕ್‌ಗಳಿಗಿಂತ ಅತಿ ಕ್ಷಿಪ್ರವಾಗಿ ಸಾಲವನ್ನು ವಿತರಣೆ ಮಾಡಲಾಗುತ್ತದೆ. ಗ್ರಾಹಕರ ನೆರವಿಗೆ ಪ್ರಕ್ರಿಯೆಯುದ್ದಕ್ಕೂ ರಿಲೇಷನ್‌ಷಿಪ್ ಮ್ಯಾನೇಜರ್ ಇರಲಿದ್ದು, ಅಗತ್ಯ ಸಲಹೆ ಮತ್ತು ಮಾಹಿತಿ ನೀಡಲಿದ್ದಾರೆ ಎಂದು ಕಂಪನಿ ತಿಳಿಸಿದೆ.
‘ಗ್ರಾಹಕರು ಆನ್‌ಲೈನ್ ಮೂಲಕ ಅಗತ್ಯ ದಾಖಲೆ ಸಲ್ಲಿಸಿ ಭಾನುವಾರ ಸೇರಿದಂತೆ ವಾರದ ಎಲ್ಲ ದಿನವೂ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಬದಲಾಗುತ್ತಿರುವ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸಲು ಸಂಪೂರ್ಣ ಗೃಹ ಸಾಲ ಯೋಜನೆಯನ್ನು ಆರಂಭಿಸಿದ್ದೇವೆ’ ಎಂದು ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸುದೀಪ್ ರಾಯ್ ಹೇಳಿದರು.
‘ಬೆಂಗಳೂರು ನಮಗೆ ಮುಖ್ಯವಾದ ಮಾರುಕಟ್ಟೆ. ಅದಕ್ಕಾಗಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಇಲ್ಲಿ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ಕಡೆ ವಿಸ್ತರಿಸಲಾಗುವುದು. ಮೊದಲ ಬಾರಿಗೆ ಮನೆ ಖರೀದಿಸಲು, ನಿರ್ಮಿಸಲು ಇಚ್ಚಿಸುವ ಗ್ರಾಹಕರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಈ ಯೋಜನೆ ಆರಂಭಿಸಿದ್ದೇವೆ. ಡಿಜಿಟಲ್ ಪ್ರೊಸೆಸಿಂಗ್, ಆಕರ್ಷಕ ಬಡ್ಡಿ ದರದಿಂದ ಸಾಲ ನೀಡುವ ಪ್ರಕ್ರಿಯೆ ಕೂಡಿರಲಿದೆ. ಗೃಹಾಲಂಕಾರದ ವಸ್ತುಗಳಿಗೂ ಸಹ ಸಾಲ ನೀಡಲಾಗುತ್ತದೆ’ ಎಂದು ಕಂಪನಿಯ ಅರ್ಬನ್ ಫೈನಾನ್ಸ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಜಯ್ ಗರ್ಯಾಲಿ ತಿಳಿಸಿದರು.
ಕಂಪನಿಯ ಮಾರುಕಟ್ಟೆ ಅಧಿಕಾರಿ ಕವಿತಾ ಜಗ್ತಿಯಾನಿ ಮಾತನಾಡಿ, ಈ ಯೋಜನೆ ಪ್ರಚಾರಕ್ಕಾಗಿ ಕಂಪನಿಯು ಮೂರು ಟಿ.ವಿ ಜಾಹೀರಾತುಗಳನ್ನು ಸಿದ್ಧಪಡಿಸಿದ್ದು, ಇದರ ಮೂಲಕ ಗ್ರಾಹಕರಿಗೆ ಅರಿವು ಮೂಡಿಸಲಾಗುತ್ತಿದೆ. ನಗರದ ಎಂ.ಜಿ ರಸ್ತೆ, ವಿಮಾನ ನಿಲ್ದಾಣ ಬಳಿಯ ಟೋಲ್ ಸೇರಿದಂತೆ ವಿವಿಧೆಡೆ ಪ್ರಚಾರ ಆರಂಭಿಸಲಾಗಿದೆ ಎಂದು ಹೇಳಿದರು.
ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಲು 9004555111ಗೆ ಮಿಸ್ಡ್ ಕಾಲ್ ಅಥವಾ ಕಂಪನಿಯ ವೆಬ್‌ಸೈಟ್‌ಗೆ ಸಂದರ್ಶಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.