ADVERTISEMENT

ದಿಕ್ಕು ತಪ್ಪಿಸುವ ಪ್ಯಾಕಿಂಗ್‌ ಮಾಹಿತಿ | ಆಹಾರದ ಗುಣಮಟ್ಟ ಪರೀಕ್ಷಿಸಿ: ಐಸಿಎಂಆರ್

ಪಿಟಿಐ
Published 12 ಮೇ 2024, 15:41 IST
Last Updated 12 ಮೇ 2024, 15:41 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಆಹಾರ ಪದಾರ್ಥಗಳ ಪ್ಯಾಕಿಂಗ್‌ ಮೇಲೆ ನಮೂದಿಸಿರುವ ಮಾಹಿತಿಯು ದಾರಿ ತಪ್ಪಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ, ಜಾಗರೂಕತೆಯಿಂದ ಆ ಮಾಹಿತಿ ಓದಿದ ಬಳಿಕವಷ್ಟೇ ಗ್ರಾಹಕರು ಉತ್ಪನ್ನಗಳನ್ನು ಖರೀದಿಸಬೇಕಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ. 

ಸಕ್ಕರೆ ರಹಿತ ಆಹಾರ ಪದಾರ್ಥಗಳು ಅತಿಹೆಚ್ಚು ಕೊಬ್ಬಿನಾಂಶದಿಂದ ಕೂಡಿರುವ ಸಾಧ್ಯತೆಯಿದೆ. ಹಣ್ಣಿನ ರಸದ ಬಾಟಲಿಗಳಲ್ಲಿ ಶೇ 10ರಷ್ಟು ಮಾತ್ರವೇ ಹಣ್ಣಿನ ತಿರುಳಿನ ಅಂಶವಿರುತ್ತದೆ. ಆದರೆ, ಸಂಪೂರ್ಣವಾಗಿ ಹಣ್ಣಿನಿಂದಲೇ ಜ್ಯೂಸ್‌ ತಯಾರಿಸಲಾಗಿದೆ ಎಂದು ಹೇಳಲಾಗುತ್ತದೆ. ಆದರೆ, ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಬೆರೆಸಲಾಗಿರುತ್ತದೆ ಎಂದು ಹೇಳಿದೆ.

ADVERTISEMENT

ಆಹಾರ ಪದಾರ್ಥಗಳತ್ತ ಗ್ರಾಹಕರ ಗಮನ ಸೆಳೆಯುವುದು ಹಾಗೂ ಉತ್ಪನ್ನಗಳು ಸುರಕ್ಷಿತವಾಗಿವೆ ಎಂದು ಬಿಂಬಿಸುವುದಷ್ಟೇ ಕಂಪನಿಗಳ ಉದ್ದೇಶವಾಗಿರುತ್ತದೆ. ಹಾಗಾಗಿ, ಪ್ಯಾಕಿಂಗ್‌ ಮಾಡಿದ ಆಹಾರ ಪದಾರ್ಥಗಳ ಖರೀದಿಗೂ ಮೊದಲ ಗ್ರಾಹಕರು ಅವುಗಳ ಗುಣಮಟ್ಟದ ಬಗ್ಗೆ ಎಚ್ಚರಿಕೆವಹಿಸಬೇಕಿದೆ ಎಂದು ಸಲಹೆ ನೀಡಿದೆ.

ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ರೂಪಿಸಿರುವ ನಿಯಮಾವಳಿಗಳ ಅನ್ವಯ ಐಸಿಎಂಆರ್ ಹಾಗೂ ಹೈದರಾಬಾದ್‌ನ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯು ಜಂಟಿಯಾಗಿ ಈ ಕುರಿತು ಸಿದ್ಧಪಡಿಸಿರುವ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗಿದೆ. 

ನೈಸರ್ಗಿಕವಾಗಿ ಆಹಾರ ಪದಾರ್ಥ ತಯಾರಿಸಲಾಗಿದೆ ಎಂಬ ಬಿಂಬಿಸಿ ಗ್ರಾಹಕರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಆಹಾರದಲ್ಲಿ ಬಣ್ಣ, ಸುವಾಸನೆಗೆ ಕೃತಕ ವಸ್ತುಗಳನ್ನು ಬಳಸಿಲ್ಲ ಎಂದು ಕಂಪನಿಗಳು ಹೇಳುತ್ತವೆ. ಇಂತಹ ಪದಾರ್ಥಗಳಲ್ಲಿ ಒಂದು ಅಥವಾ ಎರಡು ನೈಸರ್ಗಿಕ ಪದಾರ್ಥಗಳನ್ನಷ್ಟೇ ಬಳಸಿರುತ್ತಾರೆ ಎಂದು ಹೇಳಿದೆ.

ಕೆಲವು ಆಹಾರ ಪೊಟ್ಟಣಗಳ ಮೇಲೆ ‘ಸಾವಯವ’ ಎಂದು ನಮೂದಿಸಲಾಗಿರುತ್ತದೆ. ಈ ಪದಾರ್ಥಗಳು ಕೀಟನಾಶಕ ಮತ್ತು ರಸಗೊಬ್ಬರದಿಂದ ಮುಕ್ತವಾಗಿವೆ ಎಂದರ್ಥ. ಆದರೆ, ಎಫ್‌ಎಸ್‌ಎಸ್‌ಎಐ ಅನುಮೋದಿಸಿದ ‘ಜೈವಿಕ ಭಾರತ್‌’ ಲೊಗೊ ಇರುವ ಪದಾರ್ಥಗಳಷ್ಟೇ ‘ಸಾವಯವ’ ಎಂದು ಪರಿಗಣಿಸಬೇಕಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.