ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಮೂರು ದಿನ ಮಾತ್ರ (ಜುಲೈ 31) ಉಳಿದಿದ್ದು, ಗಡುವು ವಿಸ್ತರಣೆಯು ಈ ಬಾರಿ ಇಲ್ಲ ಎಂದು ಸರ್ಕಾರ ಹೇಳಿದೆ.
2023ರ ಜುಲೈ 27ರವರೆಗೆ ಒಟ್ಟು 5.03 ಕೋಟಿ ಐಟಿ ರಿಟರ್ನ್ಸ್ ಸಲ್ಲಿಕೆಯಾಗಿದೆ. 4.46 ಕೋಟಿಯಷ್ಟು ಇ–ಪರಿಶೀಲನೆಗೆ ಒಳಪಟ್ಟಿದೆ. ಆ ಮೂಲಕ ಶೇ 88ರಷ್ಟು ರಿಟರ್ನ್ಸ್ ಇ–ಪರಿಶೀಲನೆಗೊಂಡಿದೆ. 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮಾರ್ಚ್ 31ರವರೆಗೆ 5 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿತ್ತು.
ಹೀಗೆ ಸಲ್ಲಿಕೆಯಾದ ರಿಟರ್ನ್ಸ್‌ಗಳಲ್ಲಿ 2.69 ಕೊಟಿಯಷ್ಟು ಈಗಾಗಲೇ ಮುಂದಿನ ಹಂತಕ್ಕೆ ಹೋಗಿದೆ. ವೇತನದಾರರು 2023–24ನೇ ಅಸೆಸ್‌ಮೆಂಟ್ ವರ್ಷದ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದೆ. ತೆರಿಗೆದಾರರಿಗೆ ನೆರವಾಗಲು ಆದಾಯ ತೆರಿಗೆ ಇಲಾಖೆಯು ದಿನದ 24 ಗಂಟೆಗಳ ಸಹಾಯವಾಣಿಯನ್ನು ಮುಂದುವರಿಸಿದೆ. ಇದರಲ್ಲಿ ಕರೆ ಮೂಲಕ, ಚಾಟ್ ಮತ್ತು ವೆಬೆಕ್ಸ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕವೂ ಸಂವಹನ ನಡೆಸಬಹುದಾಗಿದೆ. ಶನಿವಾರ ಹಾಗೂ ಭಾನುವಾರ ಸಹಿತ ಜುಲೈ 31ರವರೆಗೂ ಈ ಸೇವೆ ಮುಂದುವರಿಯಲಿದೆ‘ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಜುಲೈ 31ರ ನಂತರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರು ವಿಳಂಬ ಶುಲ್ಕವನ್ನು ಭರಿಸಬೇಕು. ₹5ಲಕ್ಷ ಆದಾಯಕ್ಕಿಂತ ಕಡಿಮೆ ಇರುವವರು ₹1ಸಾವಿರ, ಅದರ ಮೇಲಿನ ಆದಾಯದವರು ₹5ಸಾವಿರ ಶುಲ್ಕ ಪಾವತಿಸಿ ರಿಟರ್ನ್ಸ್ ಸಲ್ಲಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.