ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಫಾರ್ಚೂನ್ ನಿಯತಕಾಲಿಕ ಪ್ರಕಟಿಸಿರುವ ಜಗತ್ತಿನ ಪ್ರಮುಖ 500 ಕಂಪನಿಗಳ ಪಟ್ಟಿಯಲ್ಲಿ 98ನೇ ಸ್ಥಾನ ಪಡೆದುಕೊಂಡಿದೆ.
ದೇಶದ ಅತಿದೊಡ್ಡ ವಿಮಾ ಕಂಪನಿಯ ವರಮಾನ ₹ 7.68 ಲಕ್ಷ ಕೋಟಿ ಇದ್ದು, ಲಾಭವು ₹ 4,375 ಕೋಟಿ ಆಗಿದೆ.
ಈಚೆಗಷ್ಟೇ ಐಪಿಒ ಮೂಲಕ ಷೇರುಪೇಟೆಗೆ ಬಂದಿರುವ ಎಲ್‌ಐಸಿಯು ಈ ಪಟ್ಟಿಯಲ್ಲಿ ಭಾರತದ ಇತರೆ ಕಂಪನಿಗಳಿಗಿಂತಲೂ ಉನ್ನತ ಸ್ಥಾನ ಪಡೆದುಕೊಂಡಿದೆ.
2022ರ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷಕ್ಕೆ ಕಂಪನಿಗಳ ಒಟ್ಟಾರೆ ವರಮಾನದ ಆಧಾರದ ಮೇಲೆ ಫಾರ್ಚೂನ್ ನಿಯತಕಾಲಿಕವು 500 ಕಂಪನಿಗಳ ಸ್ಥಾನಮಾನದ ವರದಿ ಸಿದ್ಧಪಡಿಸಿದೆ. ಇದರಲ್ಲಿವಾಲ್‌ಮಾರ್ಟ್ ಮೊದಲ ಸ್ಥಾನದಲ್ಲಿದೆ. ಅಮೆಜಾನ್ ಎರಡನೇ ಸ್ಥಾನ ಪಡೆದುಕೊಂಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು 51 ಸ್ಥಾನ ಮೇಲಕ್ಕೇರಿದ್ದು, 104ನೇ ಸ್ಥಾನಕ್ಕೆ ತಲುಪಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (142), ಒಎನ್‌ಜಿಸಿ (190), ಟಾಟಾ ಸಮೂಹದ ಟಾಟಾ ಮೋಟರ್ಸ್ (370) ಮತ್ತು ಟಾಟಾ ಸ್ಟೀಲ್ (435) ಹಾಗೂ ರಾಜೇಶ್ ಎಕ್ಸ್‌ಪೋರ್ಟ್ಸ್ (437) ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಎಸ್‌ಬಿಐ 236 ಮತ್ತು ಬಿಪಿಸಿಎಲ್ 295ನೇ ಸ್ಥಾನದಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.