ನವದೆಹಲಿ: ’ಭಾರತೀಯ ಜೀವ ವಿಮೆ (ಎಲ್‌ಐಸಿ)ಯ ಒಬ್ಬರು ಹಿರಿಯ ಅಧಿಕಾರಿಯ ಚಿತ್ರ, ಸಂಸ್ಥೆಯ ಹೆಸರು ಹಾಗೂ ಚಿಹ್ನೆಯನ್ನು ಬಳಸಿ ಕೆಲವು ವ್ಯಕ್ತಿ ಅಥವಾ ಸಂಸ್ಥೆಗಳು ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುತ್ತಿವೆ. ಈ ಕುರಿತು ಎಚ್ಚರ ವಹಿಸುವುದು ಅಗತ್ಯ’ ಎಂದು ಎಲ್‌ಐಸಿ ಬುಧವಾರ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
ಇಂಥ ಜಾಹೀರಾತುಗಳ ಸಾಚಾತನವನ್ನು ಪರೀಕ್ಷಿಸಿಕೊಳ್ಳಬೇಕು ಎಂದು ತನ್ನ ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ ಪಾಲಿಸಿದಾರರಿಗೆ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
‘ಕೆಲವು ವ್ಯಕ್ತಿಗಳು ಅಥವಾ ಸಂಸ್ಥೆಗಳು ಯಾವುದೇ ಅನುಮತಿ ಪಡೆಯದೇ ಎಲ್‌ಐಸಿಯ ಹಿರಿಯ ಅಧಿಕಾರಿಗಳು, ಮಾಜಿ ಅಧಿಕಾರಿಗಳ ಚಿತ್ರಗಳನ್ನು ಹಾಗೂ ಸಂಸ್ಥೆ ಚಿಹ್ನೆ ಮತ್ತು ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರ ದಾರಿತಪ್ಪಿಸುವ ಜಾಹೀರಾತುಗಳನ್ನು ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಅನಧಿಕೃತವಾಗಿ ಪ್ರಕಟಿಸುತ್ತಿರುವುದು ಗಮನಕ್ಕೆ ಬಂದಿದೆ. ಇಂಥ ಕೃತ್ಯಗಳ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವುದು ಅಗತ್ಯ’ ಎಂದು ಎಚ್ಚರಿಕೆ ನೀಡಿದೆ.
ಎಲ್‌ಐಸಿ ಹೆಸರಿನಲ್ಲಿ ವಂಚಿಸುವ ಜಾಹೀರಾತುಗಳು ಪ್ರಸಾರವಾಗುತ್ತಿರುವುದು ಗಮನಕ್ಕೆ ಬಂದಲ್ಲಿ, ಅಂಥ ಜಾಲತಾಣಗಳ ಯುಆರ್‌ಎಲ್‌ಗಳ ವಿರುದ್ಧ ದೂರು ಸಲ್ಲಿಸುವಂತೆ ಸಂಸ್ಥೆ ಹೇಳಿದೆ.
‘ಇಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಇಂಥ ವಂಚಿಸುವ ಜಾಹೀರಾತುಗಳ ವಿರುದ್ಧ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವುದು ಸಂಸ್ಥೆಯ ಆದ್ಯ ಕರ್ತವ್ಯವಾಗಿದೆ’ ಎಂದು ಎಲ್‌ಐಸಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.