ಬೆಂಗಳೂರು: ‘ಉದ್ಯಮಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗುತ್ತಿರುವುದರಿಂದ ಗೃಹ ನಿರ್ಮಾಣ ಚಟುವಟಿಕೆಗಳು ವೇಗ ಪಡೆದಿದ್ದು, ರಿಯಲ್ ಎಸ್ಟೇಟ್ ವಹಿವಾಟು ಚೇತರಿಕೆ ಹಾದಿಗೆ ಮರಳುವ ವಿಶ್ವಾಸವಿದೆ’ ಎಂದು ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿನಯ್ ಸಾಹ್ ಹೇಳಿದರು.
‘ವಸತಿ ಮಾರುಕಟ್ಟೆಯಲ್ಲಿ ಏರಿಳಿತಗಳು ಸಹಜ. ಈ ವಲಯದಲ್ಲಿ ನೋಟು ರದ್ದತಿ, ‘ರೇರಾ’ದಂತಹ ವಿದ್ಯಮಾನಗಳ ಜತೆಗೆ ಮೂಲಸೌಕರ್ಯ ಸ್ಥಾನಮಾನ, ಕೈಗೆಟುಕುವ ಬೆಲೆಯ ಮನೆಗಳಿಗೆ ಆದ್ಯತೆಯಂತಹ ಸಕಾರಾತ್ಮಕ ಅಂಶಗಳೂ ಕಂಡುಬಂದಿವೆ’ ಎಂದರು.
ನಗರದ ಆರ್‌ಬಿಎನ್‌ಎಂಎಸ್ ಮೈದಾನದಲ್ಲಿ ಆರಂಭವಾದ ಮೂರು ದಿನಗಳ (ಜೂನ್ 22ರಿಂದ 24) ‘ನಿಮ್ಮ ಮನೆ’ ಹೆಸರಿನ ಸ್ಥಿರಾಸ್ತಿ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಎಲ್‌ಐಸಿ ಎಚ್‌ಎಫ್‌ಎಲ್‌ಗೆಈ ವರ್ಷ ಬಹಳ ವಿಶೇಷವಾಗಿದೆ. ಸಂಸ್ಥೆಯು ಸ್ಥಾಪನೆಯಾಗಿ 30ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಮೂರು ದಶಕಗಳಲ್ಲಿ ಸಂಸ್ಥೆಯು ಗುರುತರ ಸಾಧನೆಗಳನ್ನು ಮಾಡಿದೆ. ಎರಡು ವರ್ಷಗಳಿಂದ ಚಿಲ್ಲರೆ ವಹಿವಾಟಿನಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದೇವೆ. ಸಂಸ್ಥೆಯ ಬೆಳವಣಿಗೆಯಲ್ಲಿ ಬೆಂಗಳೂರು ದೊಡ್ಡ ಪ್ರಮಾಣದ ಕೊಡುಗೆ ನೀಡುತ್ತಿದೆ. ಶೇ 10ಕ್ಕೂ ಅಧಿಕ ಪ್ರಮಾಣದ ಸಾಲ ನೀಡಲಾಗುತ್ತಿದೆ’ ಎಂದರು.
‘ನಿರ್ಮಾಣಗಾರರ ದೃಷ್ಟಿಯಿಂದ ಎಲ್‌ಐಸಿ ಎಚ್‌ಎಫ್ಎಲ್ ಜತೆಗೆ ಸಹಭಾಗಿತ್ವ ಹೊಂದುವುದು ಒಂದು ಉತ್ತಮ ಅನುಭವ ನೀಡುತ್ತದೆ. ನಿರ್ದಿಷ್ಟ ಅವಧಿಯೊಳಗೆ ಯೋಜನೆಗಳಿಗೆ ಅನುಮೋದನೆ ನೀಡುವುದನ್ನೂ ಒಳಗೊಂಡು ಹಲವು ರೀತಿಯಲ್ಲಿ ಸಹಕಾರ ಸಿಗುತ್ತಿದೆ. ನಿರ್ಮಾಣಗಾರರಿಗೆ ಈ ಮೇಳವು ಉತ್ತಮ ಅವಕಾಶವಾಗಿದೆ’ ಎಂದುಶ್ರೀರಾಮ್ ಪ್ರಾಪರ್ಟೀಸ್‌ನ ಕಾರ್ಯಕಾರಿ ನಿರ್ದೇಶಕಅಶೋಕ್ ಎಸ್.ಎಸ್. ಹೇಳಿದರು.
ಕೈಗೆಟುಕುವ ದರದ ಮನೆಗಳ ವಿಭಾಗದಲ್ಲಿ ಪ್ರಮುಖ 50 ರಿಯಲ್ ಎಸ್ಟೇಟ್ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಿವೆ. ವಿಸ್ತೃತ ಶ್ರೇಣಿಯ ನಿವೇಶನಗಳು, ಫ್ಲ್ಯಾಟ್‍ಗಳು, ವಿಲ್ಲಾ ಯೋಜನೆಗಳು ಕೈಗೆಟುವ ದರದ ಮತ್ತು ಐಷಾರಾಮಿ ಶ್ರೇಣಿಯಲ್ಲಿ ಪ್ರದರ್ಶನಕ್ಕೆ ಲಭ್ಯವಿವೆ.
ಮೇಳದಲ್ಲಿ ಭಾಗವಹಿಸುವ ನಿರ್ಮಾಣಗಾರರಿಗೆ ರಿಯಾಯ್ತಿ ದರದಲ್ಲಿ ಗೃಹ ಖರೀದಿ ವಹಿವಾಟು ಕುದುರಿಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ. ಎಲ್‍ಐಸಿ ಹೌಸಿಂಗ್ ಫೈನಾನ್ಸ್‌ನಿಂದ ಸ್ಥಳದಲ್ಲೇ ಸಾಲ ಮಂಜೂರಾತಿ ನೀಡುವ ಸೌಲಭ್ಯ ಇರಲಿದೆ. ಸಾಲ ಮಂಜೂರಾತಿ ಶುಲ್ಕ ಇರುವುದಿಲ್ಲ. ಗ್ರಾಹಕರು ತಮ್ಮ ಬಜೆಟ್‍ಗೆ ಅನುಗುಣವಾಗಿ ಮನೆಗಳನ್ನು ಖರೀದಿಸಲು ಇದು ನೆರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.