ADVERTISEMENT

ಆರೋಗ್ಯ ವಿಮಾ ವಲಯ ಪ್ರವೇಶಕ್ಕೆ ಎಲ್‌ಐಸಿ ಸಿದ್ಧತೆ

ಪಿಟಿಐ
Published 28 ಮೇ 2024, 15:20 IST
Last Updated 28 ಮೇ 2024, 15:20 IST
<div class="paragraphs"><p>ಎಲ್‌ಐಸಿ</p></div>

ಎಲ್‌ಐಸಿ

   

ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು ಆರೋಗ್ಯ ವಿಮಾ ವಲಯವನ್ನು ಪ್ರವೇಶಿಸುವುದಕ್ಕೆ ನಿರ್ಧರಿಸಿದ್ದು, ಈ ಕುರಿತು ಆಂತರಿಕ ಮಟ್ಟದಲ್ಲಿನ ಕೆಲಸಗಳಿಗೆ ಚಾಲನೆ ನೀಡಲಾಗಿದೆ ಎಂದು ಎಲ್‌ಐಸಿ ಅಧ್ಯಕ್ಷ ಸಿದ್ಧಾರ್ಥ ಮೊಹಂತಿ ಹೇಳಿದ್ದಾರೆ.

ವಿಮಾ ಕಾಯ್ದೆ 1938 ಮತ್ತು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಐ) ನಿಯಮಾವಳಿಗಳ ಅನ್ವಯ ಒಂದೇ ಕಂಪನಿಗೆ ಜೀವ ವಿಮೆ, ಸಾಮಾನ್ಯ ಅಥವಾ ಆರೋಗ್ಯ ವಿಮಾ ಸೌಲಭ್ಯ ಒದಗಿಸಲು ಸಂಯೋಜಿತ ಪರವಾನಗಿ ನೀಡುವಂತಿಲ್ಲ. ಹಾಗಾಗಿ, ವಿಮಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಎಲ್‌ಐಸಿಗೆ ಈ ಪರವಾನಗಿ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ADVERTISEMENT

‘ಎಂಜಿನಿಯರಿಂಗ್‌ ಹಾಗೂ ಅಗ್ನಿ ಅವಘಡಕ್ಕೆ ಸಂಬಂಧಿಸಿದ ವಿಮಾ ಸೌಲಭ್ಯ ಕಲ್ಪಿಸುವಲ್ಲಿ ನಿಗಮವು ಪರಿಣತಿ ಹೊಂದಿಲ್ಲ. ಆದರೆ, ಆರೋಗ್ಯ ವಿಮಾ ವಲಯದ ಸೌಲಭ್ಯ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ಮೂಲ ಸೇವೆಗೆ (ಜೀವ ವಿಮೆ) ನೇರವಾಗಿ ಸಂಬಂಧವಿಲ್ಲದ ಹೊಸ ಸೇವಾ ಕ್ಷೇತ್ರಕ್ಕೂ ವಹಿವಾಟು ವಿಸ್ತರಿಸಲಿದೆ’ ಎಂದು ಮೊಹಾಂತಿ ಹೇಳಿದ್ದಾರೆ.

ಸಂಸದೀಯ ಸಮಿತಿ ಹೇಳಿದ್ದೇನು?: 

ದೇಶದ ನಾಗರಿಕರಿಗೆ ವಿಮಾ ಸೌಲಭ್ಯ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಬಿಜೆಪಿ ಸಂಸದ ಜಯಂತ್‌ ಸಿನ್ಹಾ ಅವರ ಅಧ್ಯಕ್ಷತೆಯಲ್ಲಿ ಸಂಸದೀಯ ಸಮಿತಿ ಸಮಿತಿ ರಚಿಸಿತ್ತು.

ಈ ಸಮಿತಿಯು ದೇಶದೊಳಗೆ ವಿಮಾ ಸೌಲಭ್ಯ ಹೆಚ್ಚಿಸಲು ಒಂದು ಕಂಪನಿಗೆ ಜೀವ ವಿಮೆ, ಸಾಮಾನ್ಯ ಅಥವಾ ಆರೋಗ್ಯ ವಿಮೆ ಸೌಲಭ್ಯ ನೀಡಲು ಸಂಯೋಜಿತ ಪರವಾನಗಿ ನೀಡಬಹುದು ಎಂದು ಶಿಫಾರಸು ಮಾಡಿದೆ.

ಅಲ್ಲದೆ ವಿಮಾದಾರರಿಗೆ ಜೀವ ವಿಮೆ, ಆರೋಗ್ಯ ಮತ್ತು ಉಳಿತಾಯ ಒಳಗೊಂಡಂತೆ ಒಂದೇ ಪಾಲಿಸಿಯ ಆಯ್ಕೆ ಸೌಲಭ್ಯ ಕಲ್ಪಿಸಬೇಕಿದೆ. ಇದು ವಿಮಾ ಮೌಲ್ಯವನ್ನು ಹೆಚ್ಚಿಸಲಿದೆ ಎಂದು ಸಂಸತ್‌ನಲ್ಲಿ ಮಂಡಿಸಿರುವ ಈ ವರದಿಯಲ್ಲಿ ಹೇಳಲಾಗಿದೆ. 

ವಿಮಾದಾರರು ಒಂದೇ ಕಂಪನಿಯಿಂದ ಕಡಿಮೆ ಪ್ರೀಮಿಯಂ ಪಾವತಿಸಿ ಸೌಲಭ್ಯ ಪಡೆಯುವುದರಿಂದ ವಿಮೆಯ ಮಹತ್ವದ ಬಗ್ಗೆ ಜಾಗೃತಿ ಹೆಚ್ಚಲಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.