ನವದೆಹಲಿ: ಜೀವ ವಿಮಾ ಪಾಲಿಸಿಯಡಿ ಉಳಿತಾಯ ಮಾಡಿರುವ ಮೊತ್ತಕ್ಕೆ ಅನುಗುಣವಾಗಿ ವಿಮಾ ಕಂಪನಿಗಳು ವಿಮಾದಾರರಿಗೆ ಸಾಲ ಸೌಲಭ್ಯ ಕಲ್ಪಿಸುವುದು ಕಡ್ಡಾಯವಾಗಿದೆ ಎಂದು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಬುಧವಾರ ಸೂಚಿಸಿದೆ.
ಸಾಲ ಸೌಲಭ್ಯ ಕಲ್ಪಿಸುವುದರಿಂದ ವಿಮಾದಾರರು ಹಣದ ಅಗತ್ಯತೆ ಪೂರೈಸಿಕೊಳ್ಳಲು ನೆರವಾಗಲಿದೆ ಎಂದು ತಿಳಿಸಿದೆ.
ಪಾಲಿಸಿ ಕುರಿತ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ಪರಿಶೀಲನೆಗೆ ಈ ಮೊದಲು ನಿಗದಿಪಡಿಸಿದ್ದ ಅವಧಿಯನ್ನು 15 ದಿನಗಳಿಂದ 30 ದಿನಗಳಿಗೆ ಹೆಚ್ಚಿಸಿದೆ. ಸಾಮಾನ್ಯ ವಿಮಾ ಪಾಲಿಸಿಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಗಳಲ್ಲಿಯೂ ಇದೇ ಮಾದರಿಯ ಕ್ರಮಕೈಗೊಂಡಿದೆ.
‘ಪಾಲಿಸಿದಾರರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹೊಸತನಕ್ಕೆ ಉತ್ತೇಜನ ಸಿಗಲಿದೆ. ಅಲ್ಲದೆ, ಗ್ರಾಹಕರ ಅನುಭವ ಮತ್ತು ಅವರ ಸಂತುಷ್ಟಿಗೆ ಅನುಕೂಲಕರವಾದ ವಾತಾವರಣ ಕಲ್ಪಿಸಲಾಗಿದೆ’ ಎಂದು ಪ್ರಾಧಿಕಾರ ತಿಳಿಸಿದೆ.
ಪಿಂಚಣಿ ಪಾಲಿಸಿಗಳಲ್ಲಿ ಪಾಲಿಸಿದಾರರು ಭಾಗಶಃ ಮೊತ್ತ ಹಿಂತೆಗೆದುಕೊಳ್ಳುವ ಸೌಲಭ್ಯ ಕಲ್ಪಿಸಲು ಅನುಮತಿ ನೀಡಲಾಗಿದೆ. ಇದರಿಂದ ಪಾಲಿಸಿದಾರರು ಮಕ್ಕಳ ಉನ್ನತ ಶಿಕ್ಷಣ ಅಥವಾ ವಿವಾಹ, ಮನೆ ಅಥವಾ ನಿವೇಶನ ಖರೀದಿ ನಿರ್ಮಾಣಕ್ಕೆ ನೆರವಾಗಲಿದೆ. ಅಲ್ಲದೆ, ಮಾರಣಾಂತಿಕ ಕಾಯಿಲೆಗಳ ಚಿಕಿತ್ಸಾ ವೆಚ್ಚ ಭರಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದೆ.
ಪಾಲಿಸಿಯನ್ನು ಸರೆಂಡರ್ ಮಾಡುವ ಪಾಲಿಸಿದಾರರು ಮತ್ತು ಪಾಲಿಸಿ ಮುಂದುವರಿಸುವವರಿಗೆ ನ್ಯಾಯಸಮ್ಮತವಾಗಿ ದೊರೆಯುವ ಮೊತ್ತದ ಬಗ್ಗೆ ತಿಳಿಸಬೇಕಿದೆ. ಪಾಲಿಸಿದಾರರ ಕುಂದುಕೊರತೆ ಪರಿಹರಿಸಲು ಕ್ರಮವಹಿಸಬೇಕಿದೆ ಎಂದು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.