ಬೆಂಗಳೂರು: ಡಿಜಿಟಲ್ ವೇದಿಕೆಗಳ ಮೂಲಕ ಸಾಲ ವಿತರಣೆ ಮಾಡುವ 600 ಅಕ್ರಮ ಆ್ಯಪ್‌ಗಳು ದೇಶದಲ್ಲಿ ಇವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರಚಿಸಿದ್ದ ಕಾರ್ಯಕಾರಿ ಸಮಿತಿಯೊಂದು ಹೇಳಿದೆ. ಈ ಆ್ಯಪ್‌ಗಳು 81 ಬೇರೆ ಬೇರೆ ಆ್ಯಪ್ ಸ್ಟೋರ್‌ಗಳಲ್ಲಿ ಲಭ್ಯವಿವೆ.
ಡಿಜಿಟಲ್ ವೇದಿಕೆಗಳ ಮೂಲಕ ಸಾಲ ನೀಡುವುದು ಹೆಚ್ಚಳ ಆಗುತ್ತಿರುವುದು ಹಾಗೂ ಆ ವೇದಿಕೆಗಳ ಮೂಲಕ ಸಾಲ ಪಡೆದವರ ಹಕ್ಕುಗಳ ರಕ್ಷಣೆ ಬಗ್ಗೆ ಅಧ್ಯಯನ ನಡೆಸಲು ಆರ್‌ಬಿಐ ಈ ಸಮಿತಿಯನ್ನು ರಚಿಸಿತ್ತು. ಅದು ಈಚೆಗೆ ತನ್ನ ವರದಿ ಸಲ್ಲಿಸಿದೆ. ಆ್ಯಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆ ಇರುವ ಸ್ಮಾರ್ಟ್‌ಫೋನ್ ಬಳಕೆ ಮಾಡುವವರಿಗೆ ದೇಶದಲ್ಲಿ ಇಂತಹ ಒಟ್ಟು 1,100 ಆ್ಯಪ್‌ಗಳು ಲಭ್ಯವಿವೆ ಎಂಬ ಮಾತು ಸಮಿತಿಯ ವರದಿಯಲ್ಲಿ ಇದೆ. ಈ ವರ್ಷದ ಜನವರಿಯಿಂದ ಫೆಬ್ರುವರಿ ಕೊನೆಯವರೆಗಿನ ಮಾಹಿತಿ ಅನ್ವಯ ಇಷ್ಟು ಆ್ಯಪ್‌ಗಳು ಇವೆ ಎಂದು ಸಮಿತಿಯು ತಿಳಿಸಿದೆ. ಆ್ಯಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ನ ಪ್ಲೇಸ್ಟೋರ್ ಅಲ್ಲದೆ, ಬೇರೆ ಬೇರೆ ಆ್ಯಪ್ ಸ್ಟೋರ್‌ಗಳಿಂದ ಪಡೆದ ಆ್ಯಪ್‌ಗಳನ್ನೂ ಸ್ಥಾಪಿಸಿಕೊಳ್ಳಲು (ಇನ್‌ಸ್ಟಾಲ್) ಅವಕಾಶ ಇದೆ.
‘ಸಾಲ ನೀಡುವುದಾಗಿ ಆಮಿಷ ಒಡ್ಡುವ ಕೆಲವು ಅನಧಿಕೃತ ಆ್ಯಪ್‌ಗಳ ಜಾಲಕ್ಕೆ ಬಲಿಯಾಗಬಾರದು. ಸಾಲ ಕೊಡುವುದಾಗಿ ಹೇಳುವ ಇಂತಹ ಆ್ಯಪ್‌ಗಳ ಸಂಖ್ಯೆ ಹೆಚ್ಚುತ್ತಿದೆ ಎಂದೂ ಅದು ಹೇಳಿದೆ. ಸಾಲವನ್ನು ತಕ್ಷಣಕ್ಕೆ, ಯಾವುದೇ ತೊಂದರೆ ಇಲ್ಲದೆ ನೀಡುವುದಾಗಿ ಹೇಳುವ ಇಂತಹ ಆ್ಯಪ್‌ಗಳ ಜಾಲದಲ್ಲಿ ಸಾರ್ವಜನಿಕರು ಹಾಗೂ ಕೆಲವು ಸಣ್ಣ ಉದ್ದಿಮೆಗಳು ಸಿಲುಕಿರುವ ವರದಿಗಳು ಇವೆ’ ಎಂದು ಆರ್‌ಬಿಐ 2020ರ ಡಿಸೆಂಬರ್‌ನಲ್ಲಿ ಸಾರ್ವಜನಿಕರಿಗೆ ಕಿವಿಮಾತು ಹೇಳಿತ್ತು. ಇಂತಹ ಆ್ಯಪ್‌ಗಳ ಬಗ್ಗೆ ದೂರುಗಳು ಇದ್ದರೆ ಸಚೇತ್ (sachet.rbi.org.in) ಪೋರ್ಟಲ್ ಮೂಲಕ ಅದನ್ನು ದಾಖಲಿಸಬಹುದು ಎಂದು ಕೂಡ ತಿಳಿಸಿತ್ತು.
ಈ ಪೋರ್ಟಲ್ ಮೂಲಕ ಸಾರ್ವಜನಿಕರು ದೂರು ಸಲ್ಲಿಸುವುದು ಜಾಸ್ತಿ ಆಗುತ್ತಿದೆ. 2020ರ ಜನವರಿಯಿಂದ 2021ರ ಮಾರ್ಚ್‌ವರೆಗಿನ ಅವಧಿಯಲ್ಲಿ 2,562 ದೂರುಗಳು ದಾಖಲಾಗಿವೆ. ಬಹುತೇಕ ದೂರುಗಳು ರಿಸರ್ವ್ ಬ್ಯಾಂಕ್ನಿಯಂತ್ರಣದಲ್ಲಿ ಇಲ್ಲದ ಸಂಸ್ಥೆಗಳ ಆ್ಯಪ್‌ಗಳ ವಿರುದ್ಧ ಇವೆ. ಕೆಲವೊಂದಿಷ್ಟು ದೂರುಗಳು ಸಣ್ಣ ಪ್ರಮಾಣದ ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ವಿರುದ್ಧ ಇವೆ. ಇಂತಹ ಆ್ಯಪ್‌ಗಳ ವಿರುದ್ಧ ಸಚೇತ್ ಪೋರ್ಟಲ್ ಮೂಲಕ ದಾಖಲಾಗಿರುವ ರಾಜ್ಯವಾರು ದೂರುಗಳ ಪಟ್ಟಿಯಲ್ಲಿ ಕರ್ನಾಟಕವು ಎರಡನೆಯ ಸ್ಥಾನದಲ್ಲಿ ಇದೆ. ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ ಇದೆ.
ಡಿಜಿಟಲ್ ವೇದಿಕೆಗಳ ಮೂಲಕ ಸಾಲ ನೀಡುವುದನ್ನು, ಸಾಲ ಪಡೆಯುವುದನ್ನು ಸುರಕ್ಷಿತಗೊಳಿಸಲು ಕಾರ್ಯಪಡೆಯುವ ಕೆಲವು ಶಿಫಾರಸುಗಳನ್ನು ಮಾಡಿದೆ. ಡಿಜಿಟಲ್ ವೇದಿಕೆ ಮೂಲಕ ಸಾಲ ಕೊಡುವ ಆ್ಯಪ್‌ಗಳು ನೋಡಲ್ ಸಂಸ್ಥೆಯೊಂದರ ಮೂಲಕ ನೋಂದಣಿ ಮಾಡಿಸಿಕೊಳ್ಳುವ ವ್ಯವಸ್ಥೆ ಇರಬೇಕು. ಇಂತಹ ಆ್ಯಪ್ ಕಂಪನಿಗಳು ಸ್ವಯಂ ನಿಯಂತ್ರಣಕ್ಕೆ ಪ್ರತ್ಯೇಕ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳಬೇಕು. ಡಿಜಿಟಲ್ ವೇದಿಕೆ ಮೂಲಕ ಸಾಲ ನೀಡುವಲ್ಲಿ ಅಕ್ರಮ ನಡೆಯುವುದನ್ನು ತಡೆಯಲು ಪ್ರತ್ಯೇಕ ಕಾಯ್ದೆ ರೂಪುಗೊಳ್ಳಬೇಕು ಎಂದು ಕಾರ್ಯಪಡೆಯ ಶಿಫಾರಸಿನಲ್ಲಿ ಹೇಳಲಾಗಿದೆ.
ದೂರುಗಳು – ಯಾವ ರಾಜ್ಯದಿಂದ, ಎಷ್ಟು?(ರಾಜ್ಯ;ದೂರುಗಳ ಸಂಖ್ಯೆ)
ಮಹಾರಾಷ್ಟ್ರ;572
ಕರ್ನಾಟಕ;394
ದೆಹಲಿ;352
ಹರಿಯಾಣ;314
ತೆಲಂಗಾಣ;185
ಆಂಧ್ರಪ್ರದೇಶ;144
ಉತ್ತರಪ್ರದೇಶ;142
ಪಶ್ಚಿಮ ಬಂಗಾಳ;138
ತಮಿಳುನಾಡು;57
ಗುಜರಾತ್;56
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.