ನವದೆಹಲಿ: ಎಬಿಜಿ ಶಿಪ್‌ಯಾರ್ಡ್ ಕಂಪನಿಗೆ ನೀಡಿದ್ದ ಸಾಲವು ಅನುತ್ಪಾದಕ (ಎನ್‌ಪಿಎ) ಆಗಿದ್ದು ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದರು. ಈ ಕಂಪನಿಯು ಎಸಗಿದ ವಂಚನೆಯನ್ನು ಬ್ಯಾಂಕ್‌ಗಳು ಬಹಳ ತ್ವರಿತವಾಗಿ ಪತ್ತೆ ಮಾಡಿವೆ ಎಂದೂ ನಿರ್ಮಲಾ ತಿಳಿಸಿದರು.
ಇಂತಹ ಪ್ರಕರಣಗಳನ್ನು ಪತ್ತೆ ಮಾಡಲು ಬ್ಯಾಂಕ್‌ಗಳು ಸಾಮಾನ್ಯವಾಗಿ 52ರಿಂದ 56 ತಿಂಗಳುಗಳನ್ನು ತೆಗೆದುಕೊಳ್ಳುವುದಿದೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಐಸಿಐಸಿಐ ಬ್ಯಾಂಕ್ ನೇತೃತ್ವದ 24 ಬ್ಯಾಂಕ್‌ಗಳ ಒಕ್ಕೂಟಕ್ಕೆ ವಂಚನೆ ಎಸಗಿದ ಆರೋಪದ ಅಡಿಯಲ್ಲಿ ಎಬಿಜಿ ಶಿಪ್‌ಯಾರ್ಡ್ ಲಿಮಿಡೆಟ್, ಅದರ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಿಷಿ ಕಮಲೇಶ್ ಅಗರ್ವಾಲ್ ವಿರುದ್ಧ ಕೇಂದ್ರೀಯ ತನಿಖಾ ದಳವು (ಸಿಬಿಐ) ಈಚೆಗೆ ಪ್ರಕರಣ ದಾಖಲಿಸಿಕೊಂಡಿದೆ. ಎಬಿಜಿ ಶಿಪ್‌ಯಾರ್ಡ್ ಕಡೆಯಿಂದ ಆಗಿರುವ ವಂಚನೆಯ ಮೊತ್ತವು ನೀರವ್ ಮೋದಿ ಮತ್ತು ಅವನ ಮಾವ ಮೆಹುಲ್ ಚೋಕ್ಸಿ ಎಸಗಿದ ವಂಚನೆಯ ಮೊತ್ತಕ್ಕಿಂತ ದೊಡ್ಡದು. ಇವರಿಬ್ಬರು ಜೊತೆಯಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಅಂದಾಜು ₹ 14 ಸಾವಿರ ಕೋಟಿ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ.
ಎನ್‌ಡಿಎ ಸರ್ಕಾರದ ಅವಧಿಯಲ್ಲಿ ದೇಶದ ಬ್ಯಾಂಕ್‌ಗಳ ಹಣಕಾಸಿನ ಸ್ಥಿತಿ ಸುಧಾರಿಸಿದೆ. ಬ್ಯಾಂಕ್‌ಗಳು ಬಂಡವಾಳ ಮಾರುಕಟ್ಟೆಯಿಂದ ಹಣ ಸಂಗ್ರಹಿಸುವ ಸ್ಥಿತಿಯಲ್ಲಿ ಇವೆ ಎಂದು ನಿರ್ಮಲಾ ಹೇಳಿದರು.
ಇದೇ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್, ‘ಹಣದುಬ್ಬರ ಪ್ರಮಾಣವನ್ನು ಅಂದಾಜು ಮಾಡಲು ಆರ್‌ಬಿಐ ನಿಖರ ಮಾರ್ಗ ಅನುಸರಿಸುತ್ತದೆ’ ಎಂದು ಹೇಳಿದರು. 2021ರ ಅಕ್ಟೋಬರ್‌ನಿಂದ ಹಣದುಬ್ಬರ ಪ್ರಮಾಣವು ಇಳಿಕೆಯ ಹಾದಿಯಲ್ಲಿ ಇದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.