ADVERTISEMENT

ಮತ್ತೆ ಇನ್‍ಡೆಕ್ಸೇಷನ್‍ ಲಭ್ಯ: ನಿರ್ಮಲಾ ಸೀತಾರಾಮನ್‌

ಎಲ್‌ಟಿಸಿಜಿಗೆ ತಿದ್ದು‍ಪಡಿ: ತೆರಿಗೆದಾರರು ನಿರಾಳ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 16:16 IST
Last Updated 7 ಆಗಸ್ಟ್ 2024, 16:16 IST
ನಿರ್ಮಲಾ ಸೀತಾರಾಮನ್‌ –ಪಿಟಿಐ ಚಿತ್ರ
ನಿರ್ಮಲಾ ಸೀತಾರಾಮನ್‌ –ಪಿಟಿಐ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರವು ಹಣಕಾಸು ಮಸೂದೆ 2024ಕ್ಕೆ ತಿದ್ದುಪಡಿ ತರುವ ಮೂಲಕ ರಿಯಲ್‌ ಎಸ್ಟೇಟ್‌ ಕ್ಷೇತ್ರದ ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ‌ಗೆ (ಎಲ್‌ಟಿಸಿಜಿ) ಸಿಗುತ್ತಿದ್ದ‌ ‘ಇನ್‍ಡೆಕ್ಸೇಷನ್‍’ ಪ್ರಯೋಜನವನ್ನು ಮತ್ತೆ ಕಲ್ಪಿಸಿದೆ.

ಆಸ್ತಿ ಖರೀದಿಸಿ ಮಾರಾಟ ಮಾಡಿದ ಲಾಭದ ಮೇಲೆ ತೆರಿಗೆ ವಿಧಿಸುವುದಕ್ಕೂ ಮೊದಲು ಸರ್ಕಾರವು, ‘ಇನ್‍ಡೆಕ್ಸೇಷನ್‍’ ರಿಯಾಯಿತಿ ನೀಡುತ್ತಿತ್ತು. ಇದರಡಿ ಹಣದುಬ್ಬರ ಸೂಚ್ಯಂಕದ ಏರಿಳಿತಕ್ಕೆ ಅನುಗುಣವಾಗಿ ಶೇ 20ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು.

ಆದರೆ, 2024–25ನೇ ಸಾಲಿನ ಬಜೆಟ್‌ನಲ್ಲಿ ಈ ತೆರಿಗೆ ದರವನ್ನು ಶೇ 12.5ಕ್ಕೆ ಇಳಿಸಿದ್ದ ಸರ್ಕಾರವು, ‘ಇನ್‍ಡೆಕ್ಸೇಷನ್‍’ ಅನ್ನು ಕೈಬಿಟ್ಟಿತ್ತು. ಇದಕ್ಕೆ ತೆರಿಗೆದಾರರು ಅಸಮಾಧಾನ ಹೊರ ಹಾಕಿದ್ದರು.

ADVERTISEMENT

ಲೋಕಸಭೆಯು ಬುಧವಾರ ಎಲ್‌ಟಿಸಿಜಿ ತಿದ್ದುಪಡಿಗೆ ಅನುಮೋದನೆ ನೀಡಿದೆ. ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಹೊಸ ಪದ್ಧತಿ ಅಥವಾ ಹಳೆಯ ಪದ್ಧತಿಯಡಿ ತಮಗೆ ಯಾವುದು ಅನುಕೂಲವೋ ಅದರ ಆಧಾರದ ಮೇಲೆ ತೆರಿಗೆದಾರರು ತೆರಿಗೆ ಲೆಕ್ಕಾಚಾರ ಮಾಡಬಹುದಾಗಿದೆ. ಈ ಎರಡರಲ್ಲಿ ಯಾವುದು ಕಡಿಮೆಯೋ ಅದನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಆದರೆ, ಪ್ರಸಕ್ತ ವರ್ಷದ ಜುಲೈ 23ಕ್ಕೂ ಮೊದಲು ವ್ಯಕ್ತಿಗಳು ಅಥವಾ ಹಿಂದೂ ಅವಿಭಕ್ತ ಕುಟುಂಬದವರು (ಎಚ್‌ಯುಎಫ್‌) ಖರೀದಿಸಿದ ಸ್ಥಿರಾಸ್ತಿಗಳಿಗಷ್ಟೇ ಈ ಎರಡು ಪದ್ಧತಿಗಳು ಅನ್ವಯವಾಗಲಿವೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಾತನಾಡಿ, ‘ಮಧ್ಯಮ ವರ್ಗದ ತೆರಿಗೆದಾರರಿಗೆ ಅನುಕೂಲ ಕಲ್ಪಿಸಲು ಮತ್ತೆ ‘ಇನ್‍ಡೆಕ್ಸೇಷನ್‍’ ಪ್ರಯೋಜನ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ಎಲ್‌ಟಿಸಿಜಿ ತಿದ್ದುಪಡಿ ಸೇರಿ 45 ತಿದ್ದುಪಡಿಗಳನ್ನು ಒಳಗೊಂಡಿರುವ ಹಣಕಾಸು ಮಸೂದೆಯು ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ಆದರೆ, ಮೇಲ್ಮನೆಗೆ ಹಣಕಾಸು ಮಸೂದೆಯನ್ನು ತಿರಸ್ಕರಿಸುವ ಸಾಂವಿಧಾನಿಕ ಅಧಿಕಾರವಿಲ್ಲ. 

ವಿಮಾ ಕಂತಿಗೆ ಜಿಎಸ್‌ಟಿ: ನಿರ್ಮಲಾ ನಿಲುವೇನು?  ‘ಜೀವ ವಿಮೆ ಮತ್ತು ಆರೋಗ್ಯ ವಿಮೆಯ ಪ್ರೀಮಿಯಂ ಮೇಲೆ ಶೇ 18ರಷ್ಟು ಜಿಎಸ್‌ಟಿ ವಿಧಿಸುವುದಕ್ಕೂ ಮೊದಲು ಎಲ್ಲಾ ರಾಜ್ಯಗಳು ವಿಮಾ ಕಂತುಗಳ ಮೇಲೆ ತೆರಿಗೆ ವಿಧಿಸುತ್ತಿದ್ದವು. ಜಿಎಸ್‌ಟಿ ಜಾರಿಯಾದ ಬಳಿಕ ಈ ತೆರಿಗೆಯು ಸ್ವಯಂ ಚಾಲಿತವಾಗಿ ಜಿಎಸ್‌ಟಿಗೆ ಒಳಪಟ್ಟಿದೆ’ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ವಿಮಾ ಕಂತಿನ ಮೇಲೆ ವಿಧಿಸುವ ಜಿಎಸ್‌ಟಿ ವಾಪಸ್‌ ಪಡೆಯುವಂತೆ ಪ್ರತಿಪಕ್ಷಗಳ ಒತ್ತಾಯ ಕುರಿತು ಪ್ರತಿಕ್ರಿಯಿಸಿದ ಅವರು  ‘ಸಂಗ್ರಹವಾಗುವ ಒಟ್ಟು ಜಿಎಸ್‌ಟಿಯಲ್ಲಿ ಶೇ 75ರಷ್ಟು ಹಣವು ರಾಜ್ಯಗಳಿಗೆ ಹೋಗುತ್ತಿದೆ’ ಎಂದು ಹೇಳಿದರು. ‘ಮಧ್ಯಮ ವರ್ಗದ ಜನರ ಹೂಡಿಕೆಗೆ ಉತ್ತೇಜನ ನೀಡಲು ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ’ ಎಂದರು.  ಒಂದು ವರ್ಷದ ಬಳಿಕ ಮಾರಾಟ‌ ಮಾಡುವ ಷೇರುಗಳು ಇಕ್ವಿಟಿ ಮ್ಯೂಚುವಲ್ ಫಂಡ್‌ಗಳ‌ ಮೇಲಿನ ತೆರಿಗೆ ಮಿತಿಯನ್ನು ₹1 ಲಕ್ಷದಿಂದ ₹1.25 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಷೇರುಪೇಟೆಯಲ್ಲಿ ಮಧ್ಯಮ ವರ್ಗದ ಜನರು ಹೂಡಿಕೆ ಮಾಡಲು ಇದರಿಂದ ಸಹಕಾರಿಯಾಗಲಿದೆ ಎಂದು ಹೇಳಿದರು. 

‘ಕರ್ನಾಟಕದಲ್ಲಿ ಸೆಸ್‌ ಹೆಚ್ಚಿಸಿದ್ದು ಏಕೆ’
‘ಕರ್ನಾಟಕ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸೆಸ್‌ ಅನ್ನು ಏರಿಕೆ ಮಾಡಿದ್ದು ಏಕೆ ಎಂಬ ಬಗ್ಗೆ ಕಾಂಗ್ರೆಸ್‌ ನಾಯಕರು ಮೊದಲು ಉತ್ತರ ನೀಡಬೇಕಿದೆ’ ಎಂದು ಸಚಿವೆ ನಿರ್ಮಲಾ ತರಾಟೆಗೆ ತೆಗೆದುಕೊಂಡರು. ‘ಕರ್ನಾಟಕ ಮತ್ತು ಹಿಮಾಚಲ‌ಪ್ರದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್‌ ಕಡಿತಗೊಳಿಸಲು ಕ್ರಮ ಕೈಗೊಳ್ಳುವಂತೆ ನೀವು ಆ ಸರ್ಕಾರಗಳಿಗೆ ಸೂಚಿಸಬೇಕಿದೆ’ ಎಂದರು. ‘ನಿಮ್ಮ ಪಕ್ಷಗಳು ಆಡಳಿತ ನಡೆಸುತ್ತಿ ರುವ ರಾಜ್ಯಗಳನ್ನು ಪ್ರಶ್ನಿಸುವ ಅಧಿಕಾರವೇ ನಿಮಗಿಲ್ಲ. ಆದರೆ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್‌ ಕಡಿತಗೊಳಿಸುವಂತೆ ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಮಂಡಿಸುವುದು ಏಕೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.