ADVERTISEMENT

ಟಾಟಾಗೆ ನೋಯಲ್‌ ಸಾರಥ್ಯ: ಸಮೂಹದ ಸಂಪತ್ತಿನ ಮೌಲ್ಯ ₹14 ಲಕ್ಷ ಕೋಟಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 13:48 IST
Last Updated 12 ಅಕ್ಟೋಬರ್ 2024, 13:48 IST
ನೋಯಲ್ ಟಾಟಾ –ಪಿಟಿಐ ಚಿತ್ರ
ನೋಯಲ್ ಟಾಟಾ –ಪಿಟಿಐ ಚಿತ್ರ   

ನವದೆಹಲಿ: ಟಾಟಾ ಟ್ರಸ್ಟ್‌ಗಳ ನೂತನ ಅಧ್ಯಕ್ಷರಾಗಿ ರತನ್‌ ಟಾಟಾ ಅವರ ಮಲಸಹೋದರ ನೋಯಲ್‌ ಟಾಟಾ ಅವರು ನೇಮಕವಾಗಿದ್ದಾರೆ.

ಶುಕ್ರವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ನೇಮಕಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ. 

67 ವರ್ಷದ ನೋಯಲ್‌ ಅವರು ಐರಿಷ್‌ ಪೌರತ್ವ ಹೊಂದಿದ್ದಾರೆ. ವಿಶ್ವದ 100 ದೇಶಗಳಲ್ಲಿ ವಿಸ್ತಾರಗೊಂಡಿರುವ ಟಾಟಾ ಸಮೂಹದ ₹14 ಲಕ್ಷ ಕೋಟಿ ಮೌಲ್ಯದ ಸಂಪತ್ತಿನ ಮೇಲೆ ಈ ಟ್ರಸ್ಟ್‌ಗಳು ಪರೋಕ್ಷವಾಗಿ ಹಿಡಿತ ಹೊಂದಿವೆ. ಹಾಗಾಗಿ, ಇನ್ನು ಮುಂದೆ ಟಾಟಾ ಸಮೂಹವನ್ನು ನೋಯಲ್‌ ಮುನ್ನಡೆಸಲಿದ್ದಾರೆ.

ADVERTISEMENT

ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಟಾಟಾ ಸಮೂಹವು ಬೆಳವಣಿಗೆ ಸಾಧಿಸುವಲ್ಲಿ ರತನ್‌ ಟಾಟಾ ಅವರ ಕೊಡುಗೆ ದೊಡ್ಡದು. ಅವರು ಟಾಟಾ ಟ್ರಸ್ಟ್‌ಗಳ ಅಧ್ಯಕ್ಷರಾಗಿದ್ದರು. ಟಾಟಾ ಸಮೂಹದ ಮಾತೃಸಂಸ್ಥೆಯಾದ ಟಾಟಾ ಸನ್ಸ್‌ ಪ್ರೈವೆಟ್‌ ಲಿಮಿಟೆಡ್‌ನ ಶೇ 65.9ರಷ್ಟು ಪಾಲುದಾರಿಕೆ ಮೇಲೆ ಈ ಟ್ರಸ್ಟ್‌ಗಳು ಒಡೆತನ ಹೊಂದಿವೆ.   

ಗ್ರಾಹಕರ ಸರಕು, ಹೋಟೆಲ್‌, ಆಟೊಮೊಬೈಲ್‌, ವಿಮಾನಯಾನ ಸೇರಿ 30ಕ್ಕೂ ಹೆಚ್ಚು ಕಂಪನಿಗಳು ಟಾಟಾ ಸನ್ಸ್‌ನಡಿ ಕಾರ್ಯ ನಿರ್ವಹಿಸುತ್ತವೆ.   

ಟಾಟಾ ಸಮೂಹದ ಈ ಹಿಂದಿನ ವಾರಸುದಾರರಿಗೆ ಹೋಲಿಸಿದರೆ ನೋಯಲ್‌ ಅವರ ವ್ಯಕ್ತಿತ್ವವು ಸಂಪೂರ್ಣ ಭಿನ್ನವಾಗಿದೆ. ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕಡಿಮೆ. ಆದರೆ, ಸಮೂಹದ ಹಲವು ಕಂಪನಿಗಳ ಆಡಳಿತ ಮಂಡಳಿಯ ಭಾಗವಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ.  

2019ರಿಂದ ನೋಯಲ್‌ ಅವರು ಸರ್‌ ರತನ್‌ ಟಾಟಾ ಟ್ರಸ್ಟ್ ಹಾಗೂ ಸರ್‌ ದೊರಾಬ್ಜಿ ಟ್ರಸ್ಟ್‌ನ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಮಕ್ಕಳಾದ ಮಾಯಾ, ನೆವಿಲ್ಲೆ ಮತ್ತು ಲೇಹ್ ಅವರು ಕೂಡ ಟ್ರಸ್ಟಿಗಳಾಗಿದ್ದಾರೆ.

ನೋಯಲ್‌ ಅವರು ಬ್ರಿಟನ್‌ ಮತ್ತು ಫ್ರಾನ್ಸ್‌ನಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಸಮೂಹದ ಜೊತೆಗೆ ಅವರು ನಾಲ್ಕು ದಶಕದಿಂದ ಕೆಲಸ ನಿರ್ವಹಿಸುತ್ತಿದ್ದಾರೆ.

ಟಾಟಾ ಇಂಟರ್‌ನ್ಯಾಷನಲ್‌ ಕಂಪನಿ ಮೂಲಕ ಅವರು ವೃತ್ತಿ ಬದುಕು ಆರಂಭಿಸಿದರು. ಆ ಮೂಲಕ ಟಾಟಾ ಸಮೂಹದ ವ್ಯವಹಾರವನ್ನು ಕರಗತ ಮಾಡಿಕೊಂಡರು. 2003ರಲ್ಲಿ ಅವರನ್ನು ವೋಲ್ಟಾಸ್ ಮತ್ತು ಟೈಟನ್‌ ಕಂಪನಿಯ ನಿರ್ದೇಶಕರನ್ನಾಗಿ ನೇಮಿಸಲಾಯಿತು. 

ಪ್ರಸ್ತುತ ಅವರು ಟ್ರೆಂಟ್‌, ಟಾಟಾ ಇಂಟರ್‌ನ್ಯಾಷನಲ್‌ ಲಿಮಿಟೆಡ್‌, ವೋಲ್ಟಾಸ್ ಮತ್ತು ಟಾಟಾ ಇನ್ವೆಸ್ಟ್‌ಮೆಂಟ್‌ ಕಾರ್ಪೊರೇಷನ್‌ನ ಅಧ್ಯಕ್ಷರಾಗಿದ್ದಾರೆ. ಟಾಟಾ ಸ್ಟೀಲ್‌ ಮತ್ತು ಟೈಟನ್‌ ಕಂಪನಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ನವಲ್‌ ಟಾಟಾ ಅವರಿಗೆ ಇಬ್ಬರು ಪತ್ನಿಯರು. ರತನ್‌ ಮತ್ತು ಜಿಮ್ಮಿ ಅವರು ಮೊದಲ ಪತ್ನಿಯ ಮಕ್ಕಳಾಗಿದ್ದಾರೆ. ಈ ಇಬ್ಬರು ಮದುವೆಯಾಗಿಲ್ಲ. ನೋಯಲ್‌ ಅವರ ಎರಡನೇ ಪತ್ನಿಯ ಪುತ್ರರಾಗಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದಾರೆ. 

ನೋಯಲ್‌ ಅವರು ಪಲ್ಲೊಂಜಿ ಮಿಸ್ತ್ರಿ ಅವರ ಪುತ್ರಿಯಾದ ಆಲೂ ಮಿಸ್ತ್ರಿ ಅವರನ್ನು ವಿವಾಹವಾಗಿದ್ದಾರೆ. ಈಕೆ ಸೈರಸ್‌ ಮಿಸ್ತ್ರಿ ಅವರ ತಂಗಿ. ಟಾಟಾ ಸನ್ಸ್‌ನಲ್ಲಿ ಶಾಪೂರ್ಜಿ ಪಲ್ಲೊಂಜಿ ಕುಟುಂಬವು ಶೇ 18.4ರಷ್ಟು ಷೇರುಗಳ ಮೇಲೆ ಒಡೆತನ ಹೊಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.