ನವದೆಹಲಿ: ಸತತ ಮೂರನೇ ತಿಂಗಳೂ ವಾಣಿಜ್ಯ ಸಿಲಿಂಡರ್ ದರವು ಇಳಿಕೆಯಾಗಿದೆ. ಜೊತೆಗೆ ವಿಮಾನಗಳಲ್ಲಿ ಬಳಸುವ ಇಂಧನ ಬೆಲೆಯಲ್ಲಿಯೂ ಭಾರಿ ಇಳಿಕೆಯಾಗಿದೆ.
ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಅಡುಗೆ ಸಿಲಿಂಡರ್ ದರವನ್ನು ಶನಿವಾರ ₹69 ಕಡಿತಗೊಳಿಸಲಾಗಿದೆ. ಈಗ ದರವು ₹1,676 ಆಗಿದೆ. ಏಪ್ರಿಲ್ 1ರಂದು ₹30.5 ಮತ್ತು ಮೇ 1ರಂದು ₹19 ಬೆಲೆ ಇಳಿಕೆಯಾಗಿತ್ತು.
ಅಂತರರಾಷ್ಟ್ರೀಯ ಮಟ್ಟದಲ್ಲಿನ ಕಚ್ಚಾ ತೈಲದ ದರ ಹಾಗೂ ವಿದೇಶಿ ವಿನಿಮಯ ದರದ ಆಧಾರದ ಮೇಲೆ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು, ಎಟಿಎಫ್ ಹಾಗೂ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಿವೆ.
ಆದರೆ, ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸದ್ಯ 14.2 ಕೆ.ಜಿ ತೂಕದ ಸಿಲಿಂಡರ್ ದರವು ₹803 ಆಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿಯೂ ಬದಲಾವಣೆ ಆಗಿಲ್ಲ.
ಎಟಿಎಫ್ ದರ ಇಳಿಕೆ: ವಿಮಾನಗಳಲ್ಲಿ ಬಳಸುವ ಇಂಧನದ (ಎಟಿಎಫ್) ಬೆಲೆಯನ್ನು ಶೇ 6.5ರಷ್ಟು ಇಳಿಕೆ ಮಾಡಲಾಗಿದೆ. ಸದ್ಯ ನವದೆಹಲಿಯಲ್ಲಿ ಪ್ರತಿ ಕಿಲೋ ಲೀಟರಿಗೆ ₹6,673 ದರ ಕಡಿಮೆಯಾಗಿದೆ (ಒಂದು ಕಿಲೋ ಲೀಟರ್ ಎಂದರೆ ಒಂದು ಸಾವಿರ ಲೀಟರ್). ದೆಹಲಿಯಲ್ಲಿ ಪ್ರತಿ ಕಿಲೋ ಲೀಟರ್ ದರವು ₹94,969 ಆಗಿದೆ.
ಮೇ ನಲ್ಲಿ ಪ್ರತಿ ಕಿಲೋ ಲೀಟರಿಗೆ ಎಟಿಎಫ್ ದರ ₹749.25 ಹೆಚ್ಚಳವಾಗಿತ್ತು. ಸ್ಥಳೀಯ ತೆರಿಗೆ ಆಧಾರದ ಮೇಲೆ ರಾಜ್ಯಗಳವಾರು ಎಟಿಎಫ್ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ. ಮುಂಬೈನಲ್ಲಿ ಪ್ರತಿ ಕಿಲೋ ಲೀಟರ್ ದರವು ₹95,173 ರಿಂದ ₹88,834ಕ್ಕೆ ಇಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.