ನವದೆಹಲಿ: ಮನೆಗಳಲ್ಲಿ ಅಡುಗೆಗೆ ಬಳಸುವ 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಕೇಂದ್ರ ಸರ್ಕಾರವು ₹200ರಷ್ಟು ತಗ್ಗಿಸಿದೆ. ಪರಿಷ್ಕೃತ ಬೆಲೆಯು ಬುಧವಾರದಿಂದ ಅನ್ವಯವಾಗಲಿದೆ.
ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗಿದ್ದು, ಅಧಿಕಾರಕ್ಕೆ ಬಂದರೆ ಕಡಿಮೆ ಬೆಲೆಗೆ ಎಲ್‌ಪಿಜಿ ಪೂರೈಸಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿದೆ. ರಾಜಸ್ಥಾನ, ತೆಲಂಗಾಣ, ಛತ್ತೀಸಗಡ, ಮಿಜೋರಾಂ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ.
ಬೆಂಗಳೂರಿನಲ್ಲಿ ಈಗ 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆಯು ₹1,105.5 ಇದೆ. ₹200 ಕಡಿತದ ನಂತರ ಬೆಲೆಯು ₹905.5 ಆಗಲಿದೆ. ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಇದೇ ಎಲ್‌ಪಿಜಿ ಸಿಲಿಂಡರ್ ₹705.5ಕ್ಕೆ ಸಿಗಲಿದೆ. ಊರಿನಿಂದ ಊರಿಗೆ ಎಲ್‌ಪಿಜಿ ಬೆಲೆಯಲ್ಲಿ ವ್ಯತ್ಯಾಸ ಇರುತ್ತದೆ.
ಕೇಂದ್ರದ ಈ ತೀರ್ಮಾನವನ್ನು ಪ್ರಕಟಿಸಿದ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ಜನರಿಗೆ ನೆರವಾಗುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಕೇಂದ್ರವು ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ ಅಡಿಯಲ್ಲಿ ಹೆಚ್ಚುವರಿಯಾಗಿ 75 ಲಕ್ಷ ಎಲ್‌ಪಿಜಿ ಸಂಪರ್ಕ ಕಲ್ಪಿಸಲಿದೆ. ಆಗ ಈ ಯೋಜನೆಯ ಫಲಾನುಭವಿಗಳ ಸಂಖ್ಯೆಯು 10.35 ಕೋಟಿ ಆಗಲಿದೆ.
ಅಡುಗೆ ಅನಿಲದ ಬೆಲೆಯು ಮೂರು ವರ್ಷಗಳಿಂದ ಈಚೆಗೆ ಭಾರಿ ಏರಿಕೆ ಕಂಡಿದೆ. ಇದು ಚುನಾವಣಾ ವಿಷಯವೂ ಆಗಿದೆ. 2020ರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ₹590ರಿಂದ ₹600ರ ನಡುವೆ ಇತ್ತು. ಆ ದರಕ್ಕೆ ಹೋಲಿಸಿದರೆ ಈಗ ಬೆಲೆಯು ಸರಿಸುಮಾರು ದುಪ್ಪಟ್ಟಾಗಿದೆ.
ಓಣಂ ಹಾಗೂ ರಕ್ಷಾ ಬಂಧನದ ಪ್ರಯುಕ್ತ ದೇಶದ ಮಹಿಳೆಯರಿಗೆ ಉಡುಗೊರೆಯ ರೂಪದಲ್ಲಿ ಬೆಲೆ ಕಡಿತದ ನಿರ್ಧಾರವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ಠಾಕೂರ್ ಹೇಳಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗಳಿಗೂ, ಬೆಲೆ ಕಡಿತಕ್ಕೂ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ.
ಬೆಲೆ ಕಡಿತವನ್ನು ಕೇಂದ್ರವು ಯಾವ ರೀತಿಯಲ್ಲಿ ಭರಿಸಲಿದೆ ಎಂದು ಅವರು ಹೇಳಿಲ್ಲ. ಆದರೆ, ತೈಲೋತ್ಪನ್ನಗಳನ್ನು ಮಾರಾಟ ಮಾಡುವ ಸರ್ಕಾರಿ ಸ್ವಾಮ್ಯದ ಕಂಪನಿಗಳು ಎಲ್‌ಪಿಜಿ ಬೆಲೆಯನ್ನು ಬುಧವಾರದಿಂದ ತಗ್ಗಿಸಿ, ಮುಂದೊಂದು ದಿನ ಅವು ಸರ್ಕಾರದಿಂದ ಅದಕ್ಕೆ ಪರಿಹಾರ ಧನ ಪಡೆದುಕೊಳ್ಳಲಿವೆ ಎಂದು ಭಾವಿಸಲಾಗಿದೆ.
ರಕ್ಷಾ ಬಂಧನವು ಕುಟುಂಬದಲ್ಲಿನ ಸಂತಸವನ್ನು ಹೆಚ್ಚಿಸುವಂಥದ್ದು. ಎಲ್‌ಪಿಜಿ ಬೆಲೆ ಇಳಿಕೆಯು ನನ್ನ ಕುಟುಂಬದ ಸಹೋದರಿಯರಿಗೆ ಹೆಚ್ಚು ನೆಮ್ಮದಿ ತರಲಿದೆ. ನನ್ನ ಸಹೋದರಿಯರೆಲ್ಲ ಸಂತಸದಿಂದ ಆರೋಗ್ಯದಿಂದ ಇರಲಿ ಎಂಬುದು ದೇವರಲ್ಲಿ ನನ್ನ ಪ್ರಾರ್ಥನೆ.ನರೇಂದ್ರ ಮೋದಿ, ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.