ADVERTISEMENT

ಐಷಾರಾಮಿ ಮನೆ ದುಬಾರಿ: ಆಸ್ತಿ ಸಲಹಾ ಸಂಸ್ಥೆ ಅನರಾಕ್‌ನ ಅಧ್ಯಯನ ವರದಿ

5 ವರ್ಷಗಳ ಅವಧಿಯ ಬೆಲೆ ಏರಿಕೆ ಕುರಿತು ಅನರಾಕ್‌ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 5:17 IST
Last Updated 9 ಆಗಸ್ಟ್ 2023, 5:17 IST
ಐಷಾರಾಮಿ ಮನೆ (ಸಾಂದರ್ಭಿಕ ಚಿತ್ರ)
ಐಷಾರಾಮಿ ಮನೆ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ವಿವಿಧ ವರ್ಗಗಳಿಗೆ ಸೇರಿದ ಮನೆಗಳ ಪೈಕಿ ಐಷಾರಾಮಿ ವರ್ಗಕ್ಕೆ ಸೇರಿದ ಮನೆಗಳ ಬೆಲೆಯು ಕಳೆದ ಐದು ವರ್ಷಗಳ ಅವಧಿಯಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್‌ನ ಅಧ್ಯಯನ ವರದಿ ಹೇಳಿದೆ.

ದೇಶದ ಏಳು ಪ್ರಮುಖ ನಗರಗಳಲ್ಲಿ ಮೂರು ವರ್ಗಗಳಿಗೆ ಸೇರಿದ ಮನೆಗಳ ಬೆಲೆ ಏರಿಕೆಯು 2018ರಿಂದ 2023ರ ನಡುವಿನ ಅವಧಿಯಲ್ಲಿ ಪ್ರತಿ ಚದರ ಅಡಿಗೆ ಯಾವ ಪ್ರಮಾಣದಲ್ಲಿ ಆಗಿದೆ ಎಂಬುದರ ಪರಿಶೀಲನೆಯನ್ನು ಈ ಸಂಸ್ಥೆ ನಡೆಸಿದೆ. ಐಷಾರಾಮಿ ವರ್ಗಕ್ಕೆ ಸೇರಿದ, ₹1.5 ಕೋಟಿಗಿಂತ ಹೆಚ್ಚಿನ ಬೆಲೆಯ ಮನೆಗಳ ದರದಲ್ಲಿ ಸರಾಸರಿ ಶೇಕಡ 24ರಷ್ಟು ಏರಿಕೆ ಕಂಡುಬಂದಿದೆ.

₹40 ಲಕ್ಷಕ್ಕಿಂತ ಕಡಿಮೆ ಬೆಲೆಯ, ‘ಕೈಗೆಟಕುವ ದರ’ದ ವರ್ಗಕ್ಕೆ ಸೇರುವ ಮನೆಗಳ ಮೌಲ್ಯದಲ್ಲಿ ಶೇ 15ರಷ್ಟು ಹೆಚ್ಚಳ ಈ ಅವಧಿಯಲ್ಲಿ ಆಗಿದೆ. ಹಾಗೆಯೇ, ಮಧ್ಯಮ ಮತ್ತು ಪ್ರೀಮಿಯಂ ವರ್ಗದ (₹40 ಲಕ್ಷಕ್ಕಿಂತ ಹೆಚ್ಚು, ₹1.5 ಕೋಟಿಗಿಂತ ಕಡಿಮೆ ಬೆಲೆಯ) ಮನೆಗಳ ದರದಲ್ಲಿ ಶೇ 18ರಷ್ಟು ಏರಿಕೆ ದಾಖಲಾಗಿದೆ ಎಂದು ಅನರಾಕ್ ವರದಿ ಹೇಳಿದೆ.

ADVERTISEMENT

ಬೆಂಗಳೂರಿನಲ್ಲಿ ಐದು ವರ್ಷಗಳ ಅವಧಿಯಲ್ಲಿ ಕೈಗೆಟಕುವ ವರ್ಗಕ್ಕೆ ಸೇರಿದ ಮನೆಗಳ ಮೌಲ್ಯ ಹೆಚ್ಚಳವು ಶೇ 15ರಷ್ಟು ಇದೆ. ಮಧ್ಯಮ ಹಾಗೂ ಪ್ರೀಮಿಯಂ ವಿಭಾಗದ ಮನೆಗಳ ದರ ಹೆಚ್ಚಳವು ಶೇ 20ರಷ್ಟು ಇದೆ. ಐಷಾರಾಮಿ ವರ್ಗಕ್ಕೆ ಸೇರಿದ ಮನೆಗಳ ಬೆಲೆ ಏರಿಕೆಯ ಪ್ರಮಾಣವು ಶೇ 27ರಷ್ಟು ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. ಬೆಂಗಳೂರಿನಲ್ಲಿ ಐಷಾರಾಮಿ ವರ್ಗದ ಮನೆಗಳ ಬೆಲೆಯು 2018ರಲ್ಲಿ ಪ್ರತಿ ಚದರ ಅಡಿಗೆ ₹10,210 ಆಗಿತ್ತು.

ಇದು ಈಗ ಪ್ರತಿ ಚದರ ಅಡಿಗೆ ₹12,970ಕ್ಕೆ ಹೆಚ್ಚಳ ಕಂಡಿದೆ. ಬೆಂಗಳೂರು ಮಾತ್ರವಲ್ಲದೆ ದೆಹಲಿ, ಕೋಲ್ಕತ್ತ, ಮುಂಬೈ, ಪುಣೆ, ಹೈದರಾಬಾದ್, ಚೆನ್ನೈ ನಗರಗಳನ್ನು ಅನರಾಕ್ ಸಂಸ್ಥೆಯು ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.