ADVERTISEMENT

ಮಹೀಂದ್ರ ಕಂಪನಿಗೆ ₹2,754 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 16 ಮೇ 2024, 15:11 IST
Last Updated 16 ಮೇ 2024, 15:11 IST
   

ನವದೆಹಲಿ: ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹2,754 ಕೋಟಿ ತೆರಿಗೆ ನಂತರದ ನಿವ್ವಳ ಲಾಭ ಗಳಿಸಿದೆ.

ವಾಹನಗಳ ವಿಭಾಗದಲ್ಲಿನ ಉತ್ತಮ ಬೆಳವಣಿಗೆ ಹಾಗೂ ಕೃಷಿ ಉಪಕರಣಗಳ ಮಾರಾಟದ ವಹಿವಾಟು ಹೆಚ್ಚಳದಿಂದಾಗಿ ಲಾಭದಲ್ಲಿ ಏರಿಕೆಯಾಗಿದೆ ಎಂದು ಕಂಪನಿ ಹೇಳಿದೆ. 

2022–23ನೇ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹2,637 ಕೋಟಿ ತೆರಿಗೆ ನಂತರದ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಶೇ 4ರಷ್ಟು ಏರಿಕೆಯಾಗಿದೆ ಎಂದು ಕಂಪನಿಯು, ಷೇರುಪೇಟೆಗೆ ತಿಳಿಸಿದೆ.

ADVERTISEMENT

ನಾಲ್ಕನೇ ತ್ರೈಮಾಸಿಕದಲ್ಲಿ ವರಮಾನವು ಶೇ 9ರಷ್ಟು ಏರಿಕೆಯಾಗಿದೆ. ಒಟ್ಟು ವರಮಾನವು ₹32,456 ಕೋಟಿಯಿಂದ ₹35,452 ಕೋಟಿಗೆ ತಲುಪಿದೆ. 

2022–23ನೇ ಪೂರ್ಣ ಆರ್ಥಿಕ ವರ್ಷದಲ್ಲಿ ಕಂಪನಿಯು ₹9,025 ಕೋಟಿ ನಿವ್ವಳ ಲಾಭಗಳಿಸಿತ್ತು. 2023–24ರಲ್ಲಿ ₹11,269 ಕೋಟಿ ಗಳಿಸಿದೆ. ಒಟ್ಟಾರೆ ಲಾಭದಲ್ಲಿ ಶೇ 25ರಷ್ಟು ಹೆಚ್ಚಳವಾಗಿದೆ. ವರಮಾನವು  ₹1.21 ಲಕ್ಷ ಕೋಟಿಯಿಂದ ₹1.39 ಲಕ್ಷ ಕೋಟಿಗೆ (ಶೇ 15ರಷ್ಟು) ಏರಿಕೆಯಾಗಿದೆ.

‘ಈ ಆರ್ಥಿಕ ವರ್ಷದಲ್ಲಿ ಕಂಪನಿಯು ವಹಿವಾಟು ಸದೃಢವಾಗಿದೆ. ವಾಹನಗಳ ಮಾರಾಟವು ಹೆಚ್ಚಿದೆ. ಮಾರುಕಟ್ಟೆಯ ಕಠಿಣ ಪರಿಸ್ಥಿತಿಯ ನಡುವೆಯೂ ಕೃಷಿ ಉಪಕರಣಗಳ ಮಾರಾಟದಲ್ಲಿ ಏರಿಕೆಯಾಗಿದೆ. ಆಸ್ತಿಯ ಗುಣಮಟ್ಟದಲ್ಲಿ ಮಹೀಂದ್ರ ಫೈನಾನ್ಸ್‌ ಸ್ಥಿರವಾದ ಕಾರ್ಯಕ್ಷಮತೆ ತೋರಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಅನಿಶ್ ಶಾ ತಿಳಿಸಿದ್ದಾರೆ.

ಲಾಭಾಂಶ: ಪ್ರತಿ ಷೇರಿಗೆ ₹21.10 ಲಾಭಾಂಶ ನೀಡಲು ಕಂಪನಿಯ ಆಡಳಿತ ಮಂಡಳಿಯು ಅನುಮೋದನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.