ADVERTISEMENT

ಸಣ್ಣ ಉದ್ದಿಮೆದಾರರಿಗೆ ಜಿಎಸ್‌ಟಿ ತೆರಿಗೆ ವಿನಾಯ್ತಿ ಮಿತಿ ದುಪ್ಪಟ್ಟು

ಜಿಎಸ್‌ಟಿ ಮಂಡಳಿ ತೀರ್ಮಾನ * ಶೇ 1ರ ವಿಪತ್ತು ತೆರಿಗೆ ವಿಧಿಸಲು ಕೇರಳಕ್ಕೆ ಅವಕಾಶ

ಪಿಟಿಐ
Published 10 ಜನವರಿ 2019, 12:13 IST
Last Updated 10 ಜನವರಿ 2019, 12:13 IST
ಅರುಣ್‌ ಜೇಟ್ಲಿ
ಅರುಣ್‌ ಜೇಟ್ಲಿ    

ನವದೆಹಲಿ: ಸಣ್ಣ ಪ್ರಮಾಣದಲ್ಲಿ ವಹಿವಾಟು ನಡೆಸುವವರಿಗೆ ನೆರವಾಗುವ ಸಲುವಾಗಿ ಜಿಎಸ್‌ಟಿ ಮಂಡಳಿಯು ತೆರಿಗೆ ವಿನಾಯ್ತಿ ಮಿತಿಯನ್ನು ದುಪ್ಪಟ್ಟುಗೊಳಿಸಿದೆ. ರಾಜಿ ತೆರಿಗೆ ವ್ಯವಸ್ಥೆಗೆ ಸೇರ್ಪಡೆಗೊಳ್ಳಲು ನಿಗದಿ ಮಾಡಿದ್ದ ವಹಿವಾಟಿನ ಗರಿಷ್ಠ ಮಿತಿಯನ್ನೂ ಹೆಚ್ಚಿಸಿದೆ.

ಜಿಎಸ್‌ಟಿಗೆ ನೋಂದಾವಣೆ ಮಾಡಿಕೊಳ್ಳುವವರ ವಾರ್ಷಿಕ ವಹಿವಾಟಿನ ವಿನಾಯ್ತಿ ಮಿತಿಯನ್ನು ಸದ್ಯದ ₹ 20 ಲಕ್ಷದಿಂದ ₹ 40 ಲಕ್ಷಕ್ಕೆ ಏರಿಸಲಾಗಿದೆ. ಈಶಾನ್ಯ ರಾಜ್ಯಗಳಿಗೆ ಈ ಮಿತಿ ₹ 20 ಲಕ್ಷಕ್ಕೆ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದರಿಂದ ಶೇ 60ರಷ್ಟು ನೋಂದಾಯಿತ ವಹಿವಾಟುದಾರರು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಉಳಿಯಲಿದ್ದಾರೆ. ತೆರಿಗೆ ವರಮಾನ ಸಂಗ್ರಹದ ಮೇಲೆ ಇದು ತುಂಬ ಕಡಿಮೆ ಪರಿಣಾಮ ಬೀರಲಿದೆ.

ADVERTISEMENT

ವಾರ್ಷಿಕ ವಹಿವಾಟು ಆಧರಿಸಿ ತೆರಿಗೆ ಪಾವತಿಸುವ ವ್ಯವಸ್ಥೆ ಇರುವ ಕಂಪೋಸಿಷನ್‌ ಸ್ಕೀಮ್‌ (ರಾಜಿ ತೆರಿಗೆ) ಒಪ್ಪಿಕೊಳ್ಳುವವರ ವಹಿವಾಟಿನ ಗರಿಷ್ಠ ಮಿತಿಯನ್ನು ₹ 1 ಕೋಟಿಯಿಂದ ₹ 1.5 ಕೋಟಿಗೆ ಹೆಚ್ಚಿಸಲಾಗಿದೆ. ಇದು ಈ ವರ್ಷದ ಏಪ್ರಿಲ್‌ 1 ರಿಂದ ಜಾರಿಗೆ ಬರಲಿದೆ. ಈ ಎರಡೂ ಕ್ರಮಗಳು ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಹೆಚ್ಚು ಪ್ರಯೋಜನಕಾರಿಯಾಗಿರಲಿವೆ.

‘ರಾಜಿ ತೆರಿಗೆ’ಗೆ ಒಳಪಟ್ಟವರು ವರ್ಷಕ್ಕೆ ಒಂದು ಬಾರಿ ತೆರಿಗೆ ಲೆಕ್ಕಪತ್ರ (ರಿಟರ್ನ್‌) ಸಲ್ಲಿಸಬಹುದು. ಪ್ರತಿ ಮೂರು ತಿಂಗಳಿಗೊಮ್ಮೆ ಮಾತ್ರ ತೆರಿಗೆ ಪಾವತಿಸಬಹುದಾಗಿದೆ.

ಸಚಿವರ ಸಮಿತಿ ರಚನೆ

ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ರಿಯಲ್‌ ಎಸ್ಟೇಟ್‌ ಮತ್ತು ಲಾಟರಿಗಳನ್ನು ಸೇರ್ಪಡೆ ಮಾಡುವ ಬಗ್ಗೆ ನಿರ್ಧಾರಕ್ಕೆ ಬರಲು ಮಂಡಳಿಯು ಏಳು ಸದಸ್ಯರ ಸಮಿತಿ ರಚಿಸಿದೆ.

ಈ ವಿಷಯದ ಬಗ್ಗೆ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ವಿವಿಧ ರಾಜ್ಯಗಳ ಹಣಕಾಸು ಸಚಿವರಲ್ಲಿ ಭಿನ್ನಾಭಿಪ್ರಾಯ ಕಂಡು ಬಂದಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ವಿಪತ್ತು ತೆರಿಗೆ ವಿಧಿಸಲು ಕೇರಳಕ್ಕೆ ಅವಕಾಶ

ಅತಿವೃಷ್ಟಿಯಿಂದ ತೀವ್ರವಾಗಿ ನಲುಗಿರುವ ಕೇರಳವು ರಾಜ್ಯದ ಒಳಗಿನ ಮಾರಾಟಕ್ಕೆ ಎರಡು ವರ್ಷಗಳವರೆಗೆ ಶೇ 1ರಷ್ಟು ವಿಪತ್ತು ಸೆಸ್‌ ವಿಧಿಸುವುದಕ್ಕೆ ಮಂಡಳಿಯು ಅನುಮತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.