ಬೆಂಗಳೂರು: ದೇಶದಲ್ಲಿ ಒಟ್ಟು 2,975 ಜಾಗತಿಕ ಸಾಮರ್ಥ್ಯ ಕೇಂದ್ರಗಳಿವೆ (ಜಿಸಿಸಿ). ಈ ಪೈಕಿ ಬೆಂಗಳೂರಿನಲ್ಲಿ 875ಕ್ಕೂ ಹೆಚ್ಚು ಜಿಸಿಸಿಗಳಿವೆ. ಒಟ್ಟಾರೆ ಶೇ 30ಕ್ಕೂ ಹೆಚ್ಚು ಪಾಲನ್ನು ಹೊಂದಿದ್ದು, ಶೇ 35ರಷ್ಟು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ನಾಸ್ಕಾಂನ ಪ್ರಾದೇಶಿಕ ನಿರ್ದೇಶಕ ಭಾಸ್ಕರ್ ವರ್ಮಾ ಹೇಳಿದರು.
ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ‘ಬೆಂಗಳೂರು ಟೆಕ್ ಶೃಂಗ’ದಲ್ಲಿ ಬುಧವಾರ ನಡೆದ ‘ಮೇಕಿಂಗ್ ಬೆಂಗಳೂರು ದಿ ಜಿಸಿಸಿ ಹೆಡ್ ಕ್ವಾರ್ಟರ್ ಆಫ್ ದ ವರ್ಲ್ಡ್’ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ‘500 ಹೊಸ ಜಿಸಿಸಿಗಳನ್ನು ರಾಜ್ಯವು ಆಕರ್ಷಿಸುವ ಗುರಿ ಹೊಂದಿದೆ’ ಎಂದರು.
‘ಐ.ಟಿ ವ್ಯವಸ್ಥೆ, ವ್ಯಾಪಾರ ಚಟುವಟಿಕೆ, ಉದ್ಯೋಗಿಗಳು, ಮೂಲಸೌಕರ್ಯ ಸೇರಿ ಹಲವಾರು ಅಂಶಗಳು ರಾಜ್ಯದಲ್ಲಿ ಜಿಸಿಸಿ ಸ್ಥಾಪನೆಗೆ ಪೂರಕವಾದ ಪರಿಸರವನ್ನು ಸೃಷ್ಟಿಸಿವೆ. ಇದು ಜಿಸಿಸಿ ಕೇಂದ್ರಗಳನ್ನು ತನ್ನತ್ತ ಆಕರ್ಷಿಸುತ್ತಿದೆ’ ಎಂದು ಎಚ್‌ಎಸ್‌ಬಿಸಿ ಟೆಕ್ನಾಲಜಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪ್ರದೀಪ್ ಮೆನನ್ ಹೇಳಿದರು.
‘ಭವಿಷ್ಯಕ್ಕೆ ಬೇಕಾದ ತಂತ್ರಜ್ಞಾನದ ಅಗತ್ಯವಿದೆ. ಯುಪಿಐ ವಹಿವಾಟಿನಿಂದ ನಗದು ಚಲಾವಣೆ ಕಡಿಮೆಯಾಗಿದೆ. ಇದು ದೇಶದ ಆರ್ಥಿಕ ಪ್ರಗತಿಗೆ ಸಹಕಾರಿಯಾಗಿದೆ’ ಎಂದು ಫಿಡೆಲಿಟಿ ವೆಲ್ತ್ ಆ್ಯಂಡ್ ಬ್ರೋಕರೇಜ್‌ನ ಮುಖ್ಯಸ್ಥ ವಿಜಯ್ ಕಿಶನ್ ಅಭಿಪ್ರಾಯಪಟ್ಟರು.
ಸೂಕ್ತ ಯೋಜನೆಗಳ ರೂಪಿಸುವಿಕೆ, ಪ್ರತಿಭೆಗಳ ಆಯ್ಕೆ, ಜಾಗತಿಕ ಪಾಲುದಾರಿಕೆ, ಶಿಕ್ಷಣ, ವ್ಯಾಪಾರಕ್ಕೆ ಅನುಗುಣವಾದ ವಾತಾವರಣವನ್ನು ಸೃಷ್ಟಿಸುವ ಅಗತ್ಯವಿದೆ. ಈ ಅಂಶಗಳು ಜಿಸಿಸಿ ಕೇಂದ್ರಗಳನ್ನು ರಾಜ್ಯದತ್ತ ಮತ್ತಷ್ಟು ಆಕರ್ಷಿಸಲಿವೆ ಎಂದು ಸಲಹೆ ನೀಡಿದರು.
‘ನಾವೀನ್ಯ ಅವಿಭಾಜ್ಯ ಅಂಗವಾಗಿದೆ. ಇಂಟರ್‌ನೆಟ್, ಸ್ಮಾರ್ಟ್‌ಫೋನ್, ಕೃತಕ ಬುದ್ಧಿಮತ್ತೆ, ಚಾಟ್ ಜಿಪಿಟಿ ಇಂದು ಎಲ್ಲ ಕ್ಷೇತ್ರಗಳಲ್ಲೂ ಹರಡುತ್ತಿವೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಹೆಚ್ಚಿನ ಹೂಡಿಕೆ ಮಾಡಬೇಕಿದೆ’ ಎಂದು ಎಸ್‌ಎಪಿ ಲ್ಯಾಬ್ಸ್ ಇಂಡಿಯಾದ ಉಪಾಧ್ಯಕ್ಷ ಮೈಲೇಶ್ ಜೆ. ಹೇಳಿದರು.
ಎಸ್‌ವಿಪಿ ಆ್ಯಂಡ್ ಟಾರ್ಗೆಟ್ ಇನ್ ಇಂಡಿಯಾದ ಅಧ್ಯಕ್ಷೆ ಆಂಡ್ರಿಯಾ ಝಿಮ್ಮರ್‌ಮ್ಯಾನ್ ಅವರು ಅಭಿಪ್ರಾಯ ಹಂಚಿಕೊಂಡರು.
ಬೆಂಗಳೂರು ತಂತ್ರಜ್ಞಾನದ ಕೇಂದ್ರ: ರಾಹುಲ್ ಚಾರಿ
ಬೆಂಗಳೂರು: ಬೆಂಗಳೂರು ತಂತ್ರಜ್ಞಾನದ ಕೇಂದ್ರವಾಗಿದ್ದು ಭಾರತದ ಯಾವುದೇ ನಗರವು ಬೆಂಗಳೂರಿನಷ್ಟು ಅಭಿವೃದ್ಧಿಯಾಗಿಲ್ಲ ಎಂದು ಫೋನ್ ಪೇ ಸಹ–ಸಂಸ್ಥಾಪಕ ಮತ್ತು ಸಿಟಿಒ ರಾಹುಲ್ ಚಾರಿ ಅಭಿಪ್ರಾಯಪಟ್ಟರು. ಬೆಂಗಳೂರು ಟೆಕ್ ಶೃಂಗದ ಎರಡನೇ ದಿನವಾದ ಬುಧವಾರ ನಡೆದ ‘ಬೆಂಗಳೂರು ಲೀಡಿಂಗ್ ಇನ್ನೋವೇಶನ್ ಇನ್ ಫಿನ್‌ಟೆಕ್ ಆ್ಯಂಡ್ ಬಿಯಾಂಡ್’ ಚರ್ಚೆಯಲ್ಲಿ ಅಭಿಪ್ರಾಯಪಟ್ಟರು. ಬೆಂಗಳೂರಿನ ಜನರು ಹೊಸತನ್ನು ಬೇಗ ಅಳವಡಿಸಿಕೊಳ್ಳುತ್ತಾರೆ. ರಾಜ್ಯದ ಪ್ರತಿ ಗ್ರಾಮಕ್ಕೂ ಸಾರಿಗೆ ಸಂಪರ್ಕ ವ್ಯವಸ್ಥೆ ಇದೆ. ನವೋದ್ಯಮಗಳು ಪ್ರತಿಭೆಗಳು ನಗರದ ಬೆಳವಣಿಗೆಗೆ ಕೇಂದ್ರವಾಗಿವೆ. ದೆಹಲಿ ಮುಂಬೈ ಪುಣೆ ಹೈದರಾಬಾದ್ ಸೇರಿ ಹಲವು ನಗರಗಳಲ್ಲಿ ಐ.ಟಿ ಸೇರಿ ಹಲವು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿವೆ. ಆದರೆ ಇವೆಲ್ಲವುದಕ್ಕೆ ಹೋಲಿಸಿದರೆ ಬೆಂಗಳೂರು ಹೆಚ್ಚು ಅಭಿವೃದ್ಧಿಯಾಗಿದೆ. ಆದರೂ ಕಂಪನಿಗಳಿಗೆ ಇನ್ನಷ್ಟು ಉತ್ತೇಜನ ನೀಡುವ ಅಗತ್ಯವಿದೆ ಎಂದು ಗ್ರೋವ್‌ನ ಸಹ–ಸಂಸ್ಥಾಪಕ ಮತ್ತು ಸಿಇಒ ಲಲಿತ್ ಕೇಶ್ರೆ ಹೇಳಿದರು. ಡಿಜಿಟಲ್ ವಹಿವಾಟು ಆರಂಭವಾದಾಗಿನಿಂದ ವಂಚನೆ ಪ್ರಕರಣಗಳು ಸಹ ದಾಖಲಾಗುತ್ತಿವೆ. ಇದರ ತಡೆಗೆ ತಂತ್ರಜ್ಞಾನವನ್ನು ರೂಪಿಸಲಾಗಿದೆ. ಗ್ರಾಹಕರು ಸಹ ವಂಚನೆಗೆ ಒಳಗಾಗದಂತೆ ಎಚ್ಚರವಹಿಸಬೇಕು. ಇಂತಹ ಪ್ರಕರಣವು ಗಮನಕ್ಕೆ ಬಂದರೆ ಪೊಲೀಸ್ ಇಲಾಖೆ ಸೈಬರ್ ಕ್ರೈಂ ಸಹಾಯ ಪಡೆದುಕೊಳ್ಳಬೇಕಿದೆ ಎಂದು ಚರ್ಚೆಯಲ್ಲಿ ಭಾಗವಹಿಸಿದ್ದ ಸಭಿಕರ ಪ್ರಶ್ನೆಯೊಂದಕ್ಕೆ ರಾಹುಲ್ ಚಾರಿ ಉತ್ತರಿಸಿದರು. ಚರ್ಚೆಯಲ್ಲಿ ರೇಜರ್‌ಪೇನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಹ ಸಂಸ್ಥಾಪಕ ಶಶಾಂಕ್ ಕುಮಾರ್ ಮತ್ತು ಪೀಕ್ ಎಕ್ಸ್‌ವಿಯ ವ್ಯವಸ್ಥಾಪಕ ನಿರ್ದೇಶಕ ಇಶಾನ್ ಮಿತ್ತಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.