ನವದೆಹಲಿ: ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (ಸಿಪಿಪಿಎಸ್) ಜಾರಿಗೆ ಸಂಬಂಧಿಸಿದಂತೆ ಉದ್ಯೋಗಿ ಪಿಂಚಣಿ ಯೋಜನೆ (ಇಪಿಎಸ್)– 1995ರ ಅಡಿ ಅನುಷ್ಠಾನಗೊಳಿಸಿದ್ದ ಪ್ರಾಯೋಗಿಕ ಯೋಜನೆಯು ಯಶಸ್ವಿಯಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್ ಮಾಂಡವೀಯ ತಿಳಿಸಿದ್ದಾರೆ.
ಸಿಪಿಪಿಎಸ್‌ನಡಿ ದೇಶದ ಯಾವುದೇ ಭಾಗದಲ್ಲಿ ಪಿಂಚಣಿದಾರರು, ಬ್ಯಾಂಕ್ ಅಥವಾ ಶಾಖೆಗಳಿಂದ ಪಿಂಚಣಿ ಪಡೆಯಲು ಅವಕಾಶ ಸಿಗಲಿದೆ. ಇದು ತಡೆರಹಿತ ಪಾವತಿ ವ್ಯವಸ್ಥೆಯಾಗಿದೆ. ಇದರಿಂದ 78 ಲಕ್ಷ ಇಪಿಎಸ್ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಮುಂದಿನ ವರ್ಷದ ಜನವರಿ 1ರಿಂದ ಅಧಿಕೃತವಾಗಿ ಈ ವ್ಯವಸ್ಥೆಯು ಜಾರಿಗೆ ಬರಲಿದೆ.
‘ಮೂರರಿಂದ ನಾಲ್ಕು ಬ್ಯಾಂಕ್‌ಗಳ ಜೊತೆಗೆ ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ವಿಭಾಗ ಮತ್ತು ಪ್ರಾದೇಶಿಕ ಕಚೇರಿಗಳು ಈ ಹೊಸ ಪಿಂಚಣಿ ಪಾವತಿ ಸಂಬಂಧ ಒಪ್ಪಂದ ಮಾಡಿಕೊಳ್ಳಲಿವೆ’ ಎಂದು ಮಾಂಡವೀಯ ತಿಳಿಸಿದ್ದಾರೆ.
‘ಅಕ್ಟೋಬರ್ 29ರಿಂದ 30ರ ವರೆಗೆ ಸಿಪಿಪಿಎಸ್ ಪ್ರಾಯೋಗಿಕ ಯೋಜನೆಯಡಿ ಜಮ್ಮು, ಕಾಶ್ಮೀರ ಮತ್ತು ಕರ್ನಾಲ್ ಭಾಗದ 49 ಸಾವಿರ ಪಿಂಚಣಿದಾರರಿಗೆ ₹11 ಕೋಟಿ ಪಿಂಚಣಿ ಮೊತ್ತ ಪಾವತಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಹೊಸ ವ್ಯವಸ್ಥೆಯಡಿ ಪಿಂಚಣಿದಾರರು ಬ್ಯಾಂಕ್‌ಗಳಿಗೆ ತೆರಳಿ ಪಿಂಚಣಿ ಯಾವಾಗ ಪಾವತಿಯಾಗುತ್ತದೆ ಎಂದು ವಿಚಾರಿಸುವ ಅಗತ್ಯವಿಲ್ಲ. ಪಿಂಚಣಿ ಹಣವು ಬಿಡುಗಡೆಯಾದ ತಕ್ಷಣವೇ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.