ADVERTISEMENT

ಕರ್ಣಾಟಕ ಬ್ಯಾಂಕ್‌: 3ನೇ ತ್ರೈಮಾಸಿಕದಲ್ಲಿ ₹1032 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 19:20 IST
Last Updated 23 ಜನವರಿ 2024, 19:20 IST
ಕರ್ಣಾಟಕ ಬ್ಯಾಂಕ್‌
ಕರ್ಣಾಟಕ ಬ್ಯಾಂಕ್‌   

ಮಂಗಳೂರು: ಕರ್ಣಾಟಕ ಬ್ಯಾಂಕ್ ಪ್ರಸಕ್ತ ವಿತ್ತೀಯ ವರ್ಷದ ಪ್ರಥಮ ಮೂರು ತ್ರೈಮಾಸಿಕದಲ್ಲಿ ಶೇ 25ರ ವೃದ್ಧಿ ದರದೊಂದಿಗೆ ₹1032.04 ಕೋಟಿ ನಿವ್ವಳ ಲಾಭ ಘೋಷಿಸಿದೆ.

ಹಿಂದಿನ ವಿತ್ತೀಯ ವರ್ಷದ ಪ್ರಥಮ ಮೂರು ತ್ರೈಮಾಸಿಕದಲ್ಲಿ ನಿವ್ವಳ ಲಾಭವು ₹826.49 ಕೋಟಿ ಇತ್ತು.

ಪ್ರಸಕ್ತ ತೃತೀಯ ತ್ರೈಮಾಸಿಕದಲ್ಲಿ ವಾರ್ಷಿಕ ಶೇ 10.11ರ ವೃದ್ಧಿ ದರದೊಂದಿಗೆ ₹331.08 ಕೋಟಿಗಳ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ನಿವ್ವಳ ಲಾಭವು ₹300.68 ಕೋಟಿಗಳಾಗಿತ್ತು.

ADVERTISEMENT

ಮಂಗಳೂರಿನಲ್ಲಿ ಮಂಗಳವಾರ ನಡೆದ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಹಣಕಾಸು ವರ್ಷ 2023-24ರ ತೃತೀಯ ತ್ರೈಮಾಸಿಕದ ಹಣಕಾಸು ವರದಿ ಅಂಗೀಕರಿಸಲಾಯಿತು.

ಬ್ಯಾಂಕಿನ ಒಟ್ಟು ವ್ಯವಹಾರವು, ವಾರ್ಷಿಕ ಶೇ 9.22ರ ದರದಲ್ಲಿ ವೃದ್ಧಿ ಕಂಡಿದ್ದು, ₹1,61,936.36 ಕೋಟಿಗೆ ಏರಿದೆ. ಬ್ಯಾಂಕಿನ ಮುಂಗಡಗಳು ಶೇ 9.53ರ ದರದಲ್ಲಿ ವೃದ್ಧಿ ಕಂಡು ₹69,740.97 ಕೋಟಿಗಳಷ್ಟಿವೆ ಹಾಗೂ ಠೇವಣಿಗಳು ಶೇ 8.98ರ ದರದಲ್ಲಿ ವೃದ್ಧಿ ಕಂಡು ₹92,195.39 ಕೋಟಿಗಳಿಗೆ ತಲುಪಿವೆ.

ಬ್ಯಾಂಕಿನ ವಸೂಲಾಗದ ಒಟ್ಟು ಸಾಲಗಳು (ಜಿಎನ್‌ಪಿಎ) 10 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆಯಾಗಿದ್ದು, ಶೇ 3.64ಕ್ಕೆ ಇಳಿಕೆ ಕಂಡಿವೆ. ಇದು ಮಾರ್ಚ್ 2023ರಲ್ಲಿ ಶೇ 3.74 ರಷ್ಟಿತ್ತು. ವಸೂಲಾಗದ ನಿವ್ವಳ ಸಾಲಗಳು (ಎನ್‌ಎನ್‌ಪಿಎ) ಕೂಡ 15 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆಯಾಗಿದ್ದು, ಶೇ 1.55 ಕ್ಕೆ ಇಳಿಕೆ ಕಂಡಿವೆ. ಇದು ಮಾರ್ಚ್ 2023ರಲ್ಲಿ ಶೇ 1.70 ರಷ್ಟಿತ್ತು.

ಈ ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಬ್ಯಾಂಕಿನ ಎಂಡಿ ಹಾಗೂ ಸಿಇಒ ಶ್ರೀಕೃಷ್ಣನ್ ಎಚ್., ‘ಕರ್ಣಾಟಕ ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಕಾರ್ಯಕ್ಷಮತೆಗೆ ಬ್ಯಾಂಕ್ ಕೈಗೊಂಡ ಸುಧಾರಿತ ಕಾರ್ಯಾಚರಣೆಗಳು ಹಾಗೂ ಬದಲಾವಣೆಗಳು ಕಾರಣ. ನಾವು ಆರ್ಥಿಕ ಕ್ಷೇತ್ರದಲ್ಲಿ ಹೆಚ್ಚು ಪ್ರಸ್ತುತವಾಗಲು ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಿದ್ದೇವೆ ಮತ್ತು ಹಲವಾರು ಹೊಸ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ನಮ್ಮ ಶತಮಾನೋತ್ಸವದ ವರ್ಷದಲ್ಲಿ ನಾವು ಸಮರ್ಪಕವಾದ ಅಭಿವೃದ್ಧಿ ಪಥದಲ್ಲಿದ್ದೇವೆ’ ಎಂದರು.

ಕರ್ಣಾಟಕ ಬ್ಯಾಂಕ್ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುತ್ತಿರುವುದರೊಂದಿಗೆ ಫಿನ್‌ಟೆಕ್ ಪಾಲುದಾರರೊಂದಿಗೆ ಬ್ಯಾಂಕಿಂಗ್ ರಂಗದಲ್ಲಿ ಮುನ್ನುಗ್ಗುತ್ತಿದ್ದೇವೆ.
–ಶೇಖರ್ ರಾವ್‌, ಕಾರ್ಯನಿರ್ವಾಹಕ ನಿರ್ದೇಶಕ, ಕರ್ಣಾಟಕ ಬ್ಯಾಂಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.